

ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರು ನಟಿ ಕಂಗನಾ ರಣಾವತ್. ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯಾಗಿರುವ ಅವರು ರಾಜಕಾರಣದ ಜತೆಗೆ ಬಾಲಿವುಡ್ನಲ್ಲೂ ಬಿಜಿಯಾಗಿದ್ದಾರೆ. ಸಂಸದೆಯಾದ ಬಳಿಕ ‘ಎಮರ್ಜೆನ್ಸಿ’, ‘ಭಾರತ್ ಭಾಗ್ಯ ವಿಧಾತ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಕಂಗನಾ ಸದ್ಯ ‘ಕ್ವೀನ್ 2’ ಮತ್ತು ‘ಸರ್ಕಲ್’ ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಿ, ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಆ ಮಧ್ಯೆಯೇ ಅವರು ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ. ಹಲವು ವರ್ಷಗಳ ಬಳಿಕ ಕಂಗನಾ ಹಾರರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇತ್ತೀಚೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಹಾರರ್ ಕಾನ್ ಇಂಡಿಯಾ -2026ರಲ್ಲಿ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಈ ಸಿನಿಮಾ ಘೋಷಿಸಿದ್ದು, ‘ಸ್ಕೇರಿ ಪಿಕ್ಚರ್’ ಎಂದು ಹೆಸರಿಡಲಾಗಿದೆ. ರಾಣಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ‘ಅನಸೂಯಾ’, ‘ಅಮರಾವತಿ’ ಖ್ಯಾತಿಯ ರವಿಬಾಬು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇನ್ನು ಕಂಗನಾ ರಣಾವತ್ ಹಾರರ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ರಾಜ್ 2’ (2009), ‘ಚಂದ್ರಮುಖಿ’ (2023) ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಹೆದರಿಸಿದ್ದ ಕಂಗನಾ ಇದೀಗ ಮತ್ತೊಮ್ಮೆ ಹೆದರಿಸಲು ಸಜ್ಜಾಗುತ್ತಿದ್ದಾರೆ. ‘ಇದು ಸಂಪೂರ್ಣ ಹಾರರ್ ಚಿತ್ರವಾಗಿರಲಿದೆ. ಈ ಸಿನಿಮಾ ಮೂಲಕ ನಿರ್ದೇಶಕ ರವಿಬಾಬು ಬಾಲಿವುಡ್ಗೆ ಡೆಬ್ಯೂ ಮಾಡುತ್ತಿದ್ದಾರೆ’ ಎಂದು ನಿರ್ಮಾಪಕ ರಾಣಾ ದಗ್ಗುಬಾಟಿ ಮಾಹಿತಿ ನೀಡಿದ್ದಾರೆ. ಶೀಘ್ರವೇ ಸಿನಿಮಾದ ಮತ್ತಷ್ಟು ಮಾಹಿತಿ ಚಿತ್ರತಂಡ ಹಂಚಿಕೊಳ್ಳಲಿದೆ. -ಏಜೆನ್ಸೀಸ್