ಬಿಡುಗಡೆಗೆ ಕೋರ್ಟ್​ ತಡೆ ನೀಡಿದ್ದರೂ ಕೇರಳ ಸ್ಟೋರಿ-2 ಚಿತ್ರದ ಟಿಕೆಟ್ ಬುಕಿಂಗ್ ಓಪನ್​: ಇದು ಹೇಗೆ ಸಾಧ್ಯ? Kerala Story 2

ಕೋರ್ಟ್​ ತಡೆ ನೀಡಿದ್ದರೂ ಕೇರಳ ಸ್ಟೋರಿ-2 ಚಿತ್ರದ ಟಿಕೆಟ್ ಬುಕಿಂಗ್ ಓಪನ್​! Kerala Story 2
ಕೋರ್ಟ್​ ತಡೆ ನೀಡಿದ್ದರೂ ಕೇರಳ ಸ್ಟೋರಿ-2 ಚಿತ್ರದ ಟಿಕೆಟ್ ಬುಕಿಂಗ್ ಓಪನ್​! Kerala Story 2
Published on

ಪ್ರಮುಖ ಮುಖ್ಯಾಂಶಗಳು

  • ಕೇರಳ ಸ್ಟೋರಿ 2 ಚಿತ್ರಕ್ಕೆ ತಡಯಾಜ್ಞೆ ನೀಡಿರುವ ಕೇರಳ ಹೈಕೋರ್ಟ್​ನ ಏಕ ಸದಸ್ಯ ಪೀಠ
  • ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಸಿ ಮೇಲ್ಮನವಿ ಸಲ್ಲಿಸಿರುವ ಚಿತ್ರದ ನಿರ್ಮಾಪಕರು
  • ವಿಚಾರಣೆ ನಡೆಸಿ ತನ್ನ ತೀರ್ಪನ್ನು ಮಾ.5 ಕ್ಕೆ ಕಾಯ್ದಿರಿಸಿರುವ ಹೈಕೋರ್ಟ್​ ವಿಭಾಗೀಯ ಪೀಠ
ನವದೆಹಲಿ: ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್ ( Kerala Story 2 ) ಚಿತ್ರದ ನಿರ್ಮಾಪಕರು ತಮ್ಮ ಚಿತ್ರದ ಬಿಡುಗಡೆಗೆ ತಡೆ ನೀಡಿರುವ ಕೇರಳ ಹೈಕೋರ್ಟ್​ನ ಏಕ ಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ವಿಭಾಗೀಯ ಪೀಠ ತನ್ನ ತೀರ್ಪನ್ನು ಮಾ.5 ಕ್ಕೆ ಕಾಯ್ದಿರಿಸಿದೆ.
ಸದ್ಯ ಈ ಸಿನಿಮಾಗೆ ಕೋರ್ಟ್​ ತಡಯಾಜ್ಞೆ ನೀಡಿದೆ. ಇದು ಇತ್ಯರ್ಥ ಆಗುವವರೆಗೂ ಸಿನಿಮಾವನ್ನು ಬಿಡುಗಡೆ ಮಾಡುವಂತಿಲ್ಲ. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಕೋರ್ಟ್​ ತಡೆಯಾಜ್ಞೆ ಹೊರತಾಗಿಯೂ, ಚಿತ್ರತಂಡ ಟಿಕೆಟ್​ ಬುಕ್ಕಿಂಗ್​ ಅನ್ನು ಮುಂದುವರಿಸಿದೆ. ಇದರ ವಿರುದ್ಧ ಇದೀಗ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೇರಳ ಸ್ಟೋರಿ-2 ಸಿನಿಮಾ ಇಂದು (ಫೆ. 27) ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು.
ಚಿತ್ರತಂಡವು ಸೆನ್ಸಾರ್​ ಮಂಡಳಿಯಿಂದ ಪ್ರಮಾಣಪತ್ರ ಪಡೆದಿದ್ದರೂ ಏಕಸದಸ್ಯ ಪೀಠವು 15 ದಿನಗಳವರೆಗೆ ತಡೆಯಾಜ್ಞೆ ನೀಡಿರುವ ಕಾನೂನು ಕ್ರಮವನ್ನು ವಿಭಾಗೀಯ ಪೀಠ ಪರಿಶೀಲನೆ ನಡೆಸಿತು. ಅಲ್ಲದೆ, ತನ್ನ ವಿಚಾರಣೆಯ ಸಮಯದಲ್ಲಿ, ಚಿತ್ರದ ಪ್ರಮಾಣಪತ್ರವನ್ನು ವಿರೋಧಿಸುವ ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಂತೆ ಕಂಡುಬಂದಿರುವುದನ್ನು ಗಮನಿಸಿದ ನ್ಯಾಯಾಲಯ, ಇನ್ನೂ ಸಿನಿಮಾನೇ ಬಿಡುಗಡೆಯಾಗಿಲ್ಲ, ಹೀಗಿರುವ ಆರಂಭಿಕ ಹಂತದಲ್ಲೇ ಇಂತಹ ಅರ್ಜಿಗಳನ್ನು ಹೇಗೆ ಪರಿಗಣಿಸಲಾಗುತ್ತದೆ ಎಂದು ಪ್ರಶ್ನೆ ಮಾಡಿತು. ಅಂತಿಮವಾಗಿ ವಿಭಾಗೀಯ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಮುಂಬರುವ ಆದೇಶದ ಮೇಲೆ ಕೇರಳ ಸ್ಟೋರಿ-2 ಚಿತ್ರದ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ.

ಇಲ್ಲಿಯವರೆಗಿನ ಕಾನೂನು ಕ್ರಮಗಳೇನು?

ಕಥೆಯು "ಸತ್ಯ ಘಟನೆಗಳಿಂದ" ಪ್ರೇರಿತವಾಗಿದೆ ಎಂದು ನಿರ್ಮಾಪಕರು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಚಿತ್ರದ ಯು/ಎ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಶ್ರೀದೇವ್ ನಂಬೂದಿರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ತಮ್ಮ ಅರ್ಜಿಯಲ್ಲಿ, ದಿ ಕೇರಳ ಸ್ಟೋರಿ-2 ಚಿತ್ರವು ಕೇರಳ ಮತ್ತು ಅದರ ಜನರನ್ನು ನೆಗಿಟಿವ್​ ಆಗಿ ಚಿತ್ರಿಸಿದೆ ಮತ್ತು ಅಪಾಯಕಾರಿಯಾದಂತಹ ರೂಢಿಗತ ನಂಬಿಕೆಗಳನ್ನು ಒಳಗೊಂಡಿದೆ ಎಂದು ವಾದಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (CBFC) ಟೀಕಿಸಿತು. ಮಂಡಳಿಯೂ ಸರಿಯಾಗಿ ಪರಿಶೀಲಿಸದೇ ಪ್ರಮಾಣಪತ್ರ ನೀಡಿರುವಂತೆ ಕಾಣುತ್ತದೆ. ಮಂಡಳಿಯು ಅರ್ಜಿದಾರರ ಕಳವಳಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದಿತು. ಅಲ್ಲದೆ, ವಾದಗಳನ್ನು ಸಂಪೂರ್ಣವಾಗಿ ಆಲಿಸುವವರೆಗೆ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯವು ನಿರ್ದೇಶಿಸಿದ್ದು, ಟೀಸರ್ ಮತ್ತು ಟ್ರೇಲರ್ ಕೋಮು ಸಾಮರಸ್ಯವನ್ನು ಹಾಳು ಮಾಡುವ ದೃಶ್ಯಗಳನ್ನು ಹೊಂದಿವೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಈ ಹಿಂದೆ, ಸಿಬಿಎಫ್‌ಸಿ 131 ನಿಮಿಷ 24 ಸೆಕೆಂಡುಗಳ ಅವಧಿಯ ಚಿತ್ರಕ್ಕೆ 16 ಮಾರ್ಪಾಡುಗಳನ್ನು ಸೂಚಿಸಿತ್ತು. ಈ ಬದಲಾವಣೆಗಳ ನಂತರದಲ್ಲಿಯೇ ಚಿತ್ರಕ್ಕೆ ಯು/ಎ 16+ ಪ್ರಮಾಣಪತ್ರವನ್ನು ನೀಡಲಾಗಿತ್ತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net