ಬಾಕ್ಸ್​ಆಫೀಸ್​ನಲ್ಲಿ ತಗ್ಗದ ಧುರಂಧರ್ ಚಂಡಮಾರುತ: 1000 ಕೋಟಿ ರೂ. ಗಡಿ ದಾಟಿದ​ ರಣವೀರ್ ಸಿನಿಮಾ! Dhurandhar

ಧುರಂಧರ್ ಸಿನಿಮಾದ ಪೋಸ್ಟರ್​
ಧುರಂಧರ್ ಸಿನಿಮಾದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ನಟ ರಣವೀರ್​ ಸಿಂಗ್​ ಅಭಿನಯದ ಧುರಂಧರ್​ ಸಿನಿಮಾ ತನ್ನ ಅಶ್ವಮೇಧ ಓಟವನ್ನು ಮುಂದುವರಿಸಿದೆ
  • ಡಿಸೆಂಬರ್​ 5ರಂದು ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ
  • 1000 ಕೋಟಿ ರೂ. ಗಡಿಯನ್ನು ದಾಟಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ನಂಬರ್​ 1 ಚಿತ್ರವಾಗಿದೆ
ಮುಂಬೈ: ನಟ ರಣವೀರ್​ ಸಿಂಗ್​ ಅಭಿನಯದ ಧುರಂಧರ್​ ( Dhurandhar ) ಸಿನಿಮಾ ಚಿತ್ರಮಂದಿರಗಳಲ್ಲಿ ತನ್ನ ಅಶ್ವಮೇಧ ಓಟವನ್ನು ಮುಂದುವರಿಸಿದೆ. ಡಿಸೆಂಬರ್​ 5ರಂದು ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು, 1000 ಕೋಟಿ ರೂ. ಗಡಿಯನ್ನು ದಾಟಿದೆ. ಈ ಮೂಲಕ 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ನಂಬರ್​ 1 ಸಿನಿಮಾ ಎಂಬ ದಾಖಲೆಗೆ ಧುರಂಧರ್​ ಪಾತ್ರವಾಗಿದೆ.
ಧುರಂಧರ್ ಚಿತ್ರವು ಹಲವು ದಾಖಲೆಗಳನ್ನು ಮುರಿದಿದೆ. ಈ ವರ್ಷದ ಬ್ಲಾಕ್‌ಬಸ್ಟರ್‌ ಸಿನಿಮಾಗಳಾದ ಕಾಂತಾರ ಚಾಪ್ಟರ್ 1 ಮತ್ತು ಛಾವಾ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಛಾವಾ ಸಿನಿಮಾ ವಿಶ್ವಾದ್ಯಂತ 807.91 ಕೋಟಿ ರೂ. ಗಳಿಕೆ ಮಾಡಿತ್ತು. ಅದೇ ರೀತಿ ಕನ್ನಡದ ಕಾಂತಾರ ಚಾಪ್ಟರ್ 1 ಸಿನಿಮಾ ಜಾಗತಿಕವಾಗಿ 852 ಕೋಟಿ ರೂ. ಗಳಿಸಿತು. ಇದೀಗ ಧುರಂಧರ್ ಚಿತ್ರವು ಕೇವಲ 21 ದಿನಗಳಲ್ಲಿ ವಿಶ್ವಾದ್ಯಂತ 1,000 ಕೋಟಿ ರೂ. ಗಡಿ ದಾಟಿದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಪೋಸ್ಟರ್​ ಅನ್ನು ಜಿಯೋ ಸ್ಟುಡಿಯೋಸ್ ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಚಿತ್ರದ ಒಟ್ಟು ಕಲೆಕ್ಷನ್ 1006.7 ಕೋಟಿ ರೂ. ಎಂದು ಜಿಯೋ ಸ್ಟುಡಿಯೋಸ್​ ಅಧಿಕೃತವಾಗಿ ತಿಳಿಸಿದೆ.
21 ದಿನಗಳಲ್ಲಿ ಭಾರತದಲ್ಲೇ 780 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿರುವ ಧುರಂಧರ್​ ಸಿನಿಮಾ, ವಿದೇಶದಲ್ಲಿ 217 ಕೋಟಿ ರೂ. ಗಳಿಕೆ ಮಾಡಿದೆ. ಗಮನಾರ್ಹಸಂಗತಿ ಏನೆಂದರೆ, ಧುರಂಧರ್ ಸಿನಿಮಾದ​ ನಾಗಲೋಟಕ್ಕೆ ಜಾಗತಿಕ ಬಾಕ್ಸ್​ಆಫೀಸ್ ಅಲುಗಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ 21 ದಿನಗಳು ಕಳೆದರೂ ಇಂದಿಗೂ ಅದೇ ವೇಗದಲ್ಲಿ ಈ​ ಸಿನಿಮಾ ಮುನ್ನುಗ್ಗುತ್ತಿದೆ. ಈ ಕ್ಷಣದಲ್ಲಿ ಬುಕ್​ ಮೈ ಶೋ ಓಪನ್​ ಮಾಡಿ ನೋಡಿದರು ಧುರಂಧರ್​ ಸಿನಿಮಾ ದಾಖಲೆಯ ಮಟ್ಟದಲ್ಲಿ ಬಕ್ಕಿಂಗ್​ ಆಗುತ್ತಿದೆ. ವಾರಾಂತ್ಯದಲ್ಲಿ ಈ ಸಿನಿಮಾ ಇಂದಿಗೂ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ನಾಗಾಲೋಟ ಇದೇ ರೀತಿ ಮುಂದುವರಿದರೆ ಮತ್ತಷ್ಟು ಕೋಟಿಗಳನ್ನು ತನ್ನ ಬತ್ತಳಿಕೆಗೆ ಹಾಕಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ಧುರಂಧರ್​ ಕತೆ ಏನು?

ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿ ಅಜಯ್ ಸನ್ಯಾಲ್ (ಆರ್. ಮಾಧವನ್) ನೇತೃತ್ವದ 'ಆಪರೇಷನ್ ಧುರಂಧರ್' ಅಡಿಯಲ್ಲಿ, ರಣವೀರ್ ಸಿಂಗ್ ಪಾತ್ರದಲ್ಲಿ ಒಬ್ಬ ಭಾರತೀಯ ಏಜೆಂಟ್ (ಹಮ್ಜಾ ಅಲಿ ಮಜಾರಿ ಎಂಬ ಗುಪ್ತ ಗುರುತಿನಲ್ಲಿ) ಪಾಕಿಸ್ತಾನದ ಕರಾಚಿಯ ಲ್ಯಾರಿ ಪ್ರದೇಶದ ಅಪರಾಧಿ ಮಾಫಿಯಾ ಮತ್ತು ಭಯೋತ್ಪಾದಕ ನೆಕ್ಸಸ್‌ಗೆ ಒಳನುಸುಳಿ, ರೆಹಮಾನ್ ದಾಕೈತ್ (ಅಕ್ಷಯ್ ಖನ್ನಾ) ನೇತೃತ್ವದ ಗ್ಯಾಂಗ್‌ನಲ್ಲಿ ಉನ್ನತ ಸ್ಥಾನಕ್ಕೇರಿ ಆ ನೆಟ್‌ವರ್ಕ್ ಅನ್ನು ಒಳಗಿಂದಲೇ ಧ್ವಂಸ ಮಾಡುವ ದೀರ್ಘಕಾಲೀನ ಗುಪ್ತ ಕಾರ್ಯಾಚರಣೆಯ ಕಥೆಯಾಗಿದೆ.
ಧುರಂಧರ್ ಸಿನಿಮಾದ ಪ್ರಮುಖ ಸ್ಟಾರ್ ಕಾಸ್ಟ್‌ನಲ್ಲಿ ರಣವೀರ್ ಸಿಂಗ್ (ಮುಖ್ಯ ನಾಯಕ), ಅಕ್ಷಯ್ ಖನ್ನಾ (ವಿಲ್ಲನ್​ ಪಾತ್ರ), ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಸೇರಿದಂತೆ ಅನೇಕ ಕಲಾವಿದರಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net