ಮತ್ತೆ ಹಿಂದೂ ಧರ್ಮಕ್ಕೆ ಮರಳಿ: ಎ.ಆರ್. ರೆಹಮಾನ್ ಹೇಳಿಕೆಗೆ ಮತಾಂತರದ ಅಸ್ತ್ರ ಪ್ರಯೋಗಿಸಿದ ಅನುಪ್ ಜಲೋಟಾ | A R Rahman

ಎ.ಆರ್. ರೆಹಮಾನ್,  ಅನುಪ್ ಜಲೋಟಾ
ಎ.ಆರ್. ರೆಹಮಾನ್, ಅನುಪ್ ಜಲೋಟಾ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಕೋಮುಭಾವನೆ ಹೆಚ್ಚುತ್ತಿದೆ ಎಂದ ಎ.ಆರ್​. ರೆಹಮಾನ್​
  • ನಾನು ಮುಸ್ಲಿಂ ಎಂಬ ಕಾರಣಕ್ಕೆ ಅವಕಾಶಗಳು ದೊರೆಯುತ್ತಿಲ್ಲ : ಎ.ಆರ್​. ರೆಹಮಾನ್​
  • ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿ ಎಂದ ಅನೂಪ್​ ಜಲೋಟಾ
ಬಾಲಿವುಡ್​: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (A R Rahman) ಇತ್ತೀಚಿನ ವರ್ಷಗಳಲ್ಲಿ ಚಿತ್ರೋಧ್ಯಮದಲ್ಲಿ ಕೋಮುಭಾವನೆ ಹೆಚ್ಚಾಗುತ್ತಿರುವ ಹಿನ್ನಲೆ ತಮಗೆ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ.
ರೆಹಮಾನ್ ಈ ಹೇಳಿಕೆಗೆ ಬಾಲಿವುಡ್​ನ ಜಾವೇದ್​ ಅಖ್ತರ್​, ಕಂಗನಾ ರಣಾವತ್​, ಗಾಯಕ ಶಾನ್​ ಬಳಿಕ ಈಗ ಹಿರಿಯ ಗಾಯಕ ಅನುಪ್ ಜಲೋಟಾ ಎ.ಆರ್. ರೆಹಮಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತಾಂತರಕ್ಕೆ ಸೂಚಿಸಿದ ಅನುಪ್ ಜಲೋಟಾ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿರುವ ರೆಹಮಾನ್​ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅನುಪ್ ಜಲೋಟಾ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಜನ್ಮತಃ ಹಿಂದೂವಾಗಿದ್ದು ನಂತರ ಇಸ್ಲಾಂಗೆ ಮತಾಂತರಗೊಂಡರು. ಅದರ ನಂತರ ಅವರಿಗೆ ಹೆಚ್ಚಿನ ಕೆಲಸಗಳು ದೊರೆತವು. ಇದರಿಂದ ಅವರು ಅಪಾರ ಖ್ಯಾತಿ, ಪ್ರೀತಿ ಮತ್ತು ಹಣವನ್ನು ಗಳಿಸಿದರು.
ಆದರೆ ಇವರು ಇನ್ನೂ ತಮ್ಮ ಧರ್ಮದ ಕಾರಣದಿಂದಾಗಿ ಅವಕಾಶ ಸಿಗುತ್ತಿಲ್ಲ ಎಂದು ಭಾವಿಸಿದರೆ, ಅವರು ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಕುರಿತು ಯೋಚನೆ ಮಾಡುವುದು ಒಳ್ಳೆಯದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.ಅವರು ಸಂದರ್ಶನದಲ್ಲಿ ಆಡಿದ ಮಾತಿನಿಂದ ನಾನು ಅರ್ಥ ಮಾಡಿಕೊಂಡಿದ್ದು ಇದನ್ನೇ, ಆದ್ದರಿಂದ ಅವರು ಮತ್ತೆ ಹಿಂದೂ ಧರ್ಮಕ್ಕೆ ಮರಳಿದರೆ ಮತ್ತೆ ಕೆಲಸ ಸಿಗುತ್ತದೆಯೇ ಎಂದು ನೋಡಬೇಕು ಎಂದು ಹೇಳಿದ್ದಾರೆ.
ಈಗ ಜಲೋಟಾ ನೀಡಿರುವ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಈ ಹೇಳಿಕೆಗೆ ಪರ-ವಿರೋಧ ಚರ್ಚೆಗಳಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಇದಕ್ಕೂ ಮೊದಲು ರೆಹಮಾನ್ ಹೇಳಿಕೆಗೆ ನಟಿ ಮತ್ತು ಸಂಸದೆ ಕಂಗನಾ ರನೌತ್, ರೆಹಮಾನ್ ಒಬ್ಬ ಪೂರ್ವಾಗ್ರಹ ಪೀಡಿತ ದ್ವೇಷಪೂರಿತ ವ್ಯಕ್ತಿ ಎಂದು ಹೇಳಿದ್ದರು. ಅದೇ ರೀತಿ ಗಾಯಕ ಶಾನ್, ಕೆಲಸ ದೊರೆಯದ ಕಲಾವಿದರು ಅದನ್ನು ಧರ್ಮದೊಂದಿಗೆ ಜೋಡಿಸುವುದು ಸರಿಯಲ್ಲ ಎಂದು ಹೇಳಿದ್ದರು.
https://www.facebook.com/share/r/1CnqBm9F9h/
https://www.facebook.com/share/r/1CnqBm9F9h/

ಎ.ಆರ್. ರೆಹಮಾನ್ ಹೇಳಿದ್ದೇನು?

ಬಿಬಿಸಿ ಏಷ್ಯನ್‌ನ ಯೂಟ್ಯೂಬ್ ಚಾನೆಲ್​ನಲ್ಲಿ ಹರುನ್ ರಷೀದ್ ಅವರಿಗೆ ರೆಹಮಾನ್​ ಸಂದರ್ಶನ ನೀಡಿದ್ದಾರೆ. ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂದು ರೆಹಮಾನ್ ಅವರನ್ನು ಈ ವೇಳೆ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರ ನೀಡಿದ ರೆಹಮಾನ್​, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದರು.
ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್​ ಹೇಳಿದ್ದಾರೆ.

ರೆಹಮಾನ್ ಮಗಳು ಹೇಳಿದ್ದೇನು?

ರೆಹಮಾನ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆಗಳು ಬರಲಾರಂಭಿಸಿದಾಗ, ರೆಹಮಾನ್ ಮಗಳು ರಹೀಮಾ ಸಾಮಾಜಿಕ ಮಾಧ್ಯಮದಲ್ಲಿ. ಜನರಿಗೆ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಓದಲು ಸಮಯವಿಲ್ಲ. ಆದರೆ ಯಾವಾಗಲೂ ಪರಸ್ಪರ ವಾದಿಸಲು, ಅಪಹಾಸ್ಯ ಮಾಡಲು, ಪ್ರಚೋದಿಸಲು, ನಿಂದಿಸಲು ಮತ್ತು ಅಗೌರವಿಸಲು ಸಮಯ ಹೊಂದಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿದ ಎ.ಆರ್​.ರೆಹಮಾನ್​

ತಮ್ಮ ಹೇಳಿಕೆಗಳ ಕುರಿತು ಗದ್ದಲ ಹೆಚ್ಚುತ್ತಿರುವಂತೆಯೇ, ಭಾನುವಾರ ರೆಹಮಾನ್ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ನೋವುಂಟು ಮಾಡುವುದು ಎಂದಿಗೂ ತಮ್ಮ ಉದ್ದೇಶವಲ್ಲ ಮತ್ತು ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಅವರು ಯಾವಾಗಲೂ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.
ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು. ನಾನು ಎಂದಿಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net