ರೆಹಮಾನ್ ಬಲೂಚ್ (ಅಕ್ಷಯ್ ಖನ್ನಾ) ಹತ್ಯೆಯೊಂದಿಗೆ "ಧುರಂಧರ್' ಮೊದಲ ಭಾಗ ಅಂತ್ಯವಾಗಿತ್ತು. ಅಲ್ಲಿಂದ ಹಂಜಾ ಅಲಿ ಮಜಾರಿ/ ಜಸ್ಕೀರಟ್ ಸಿಂಗ್ ರಂಗಿ (ರಣವೀರ್ ಸಿಂಗ್) ದೊಡ್ಡ ಆಟ ಪ್ರಾರಂಭಿಸಿರುವ ಸುಳಿವು ಕೂಡ ಸಿಕ್ಕಿತ್ತು. ಒಂದೆಡೆ ಸಂಸದ ಜಮೀಲ್ ಜಮಾಲಿ (ರಾಕೇಶ್ ಬೇಡಿ) ಮಗಳು ಯಾಲಿನಾ (ಸಾರಾ) ಮದುವೆಯಾಗಿ ರಾಜಕೀಯವಾಗಿ ಮನ್ನಣೆ ಗಳಿಸುವ ಹಂಜಾ, ಮತ್ತೊಂದೆಡೆ ರೆಹಮಾನ್ನ ಸದೆಬಡಿದು, ಉಜೈರ್ ಬಲೂಚ್ನ ದುಬೈಗೆ ಕಳುಹಿಸಿ, ಇಡೀ ಲಿಯಾರಿಯ ರಾಜನಾಗುತ್ತಾನೆ. ಕ್ರಮೇಣ ಐಎಸ್ಐನ ಮೇಜರ್ ಇಕ್ಬಾಲ್ (ಅರ್ಜುನ್ ರಾಂಪಾಲ್) ನಂಬಿಕೆ ಗಳಿಸಿ, ಬಡೇ ಸಾಬ್ ದಾವೂದ್ ಇಬ್ರಾಹಿಂ ಸಂಪರ್ಕ ಗಿಟ್ಟಿಸಿಕೊಂಡು, ಭಾರತಕ್ಕೆ ಡ್ರಗ್ಸ್ ಮತ್ತು ನಕಲಿ ನೋಟುಗಳನ್ನು ಸರಬರಾಜು ಮಾಡುವ ಹೊಸ ಜವಾಬ್ದಾರಿ ಪಡೆಯುತ್ತಾನೆ. ಕ್ರಮೇಣ ಲಿಯಾರಿ ಕಿಂಗ್, ಕರಾಚಿ ಬಾದ್ಶಾ ಆಗಿ ಹೆಮ್ಮರವಾಗಿ ಬೆಳೆಯುತ್ತಾನೆ. ಅದೇ ಸಮಯದಲ್ಲಿ ಭಾರತದಲ್ಲಿ ವಿವಿಧ ಭಯೋತ್ಪಾದಕ ದಾಳಿಗಳನ್ನು ನಡೆಸಿದ ಉಗ್ರರು ಪಾಕಿಸ್ತಾನದಲ್ಲಿ ಅನಾಮಿಕರ ಗುಂಡಿಗೆ ಬಲಿಯಾಗತೊಡಗುತ್ತಾರೆ. ಸಾಲು ಸಾಲು ಉಗ್ರರ ಹೆಣಗಳು ಬೀಳುತ್ತಿದ್ದಂತೆಯೇ, ಪಾಕ್ನಲ್ಲಿ ಭಾರತದ ಗೂಢಚಾರಿಗಳಿರುವ ಸುಳಿವು ಸಿಕ್ಕಿ, ಅವರು ಸ್ಪೆ$ಗಳ ಬೇಟೆಗಿಳಿಯುತ್ತಾರೆ. ಅದೇ ಸಮಯದಲ್ಲಿ ಹಂಜಾ ಲಿಯಾರಿ ಟಾಸ್ಕ್ ಫೋರ್ಸ್ನ ಎಸ್ಪಿ ಅಸ್ಲಂಗೆ (ಸಂಜಯ್ ದತ್) ಟಾರ್ಗೆಟ್ ಆಗುತ್ತಾನೆ. ಹಾಗೇ ಮೂರು ತಲೆಮಾರುಗಳಿಂದ ಸೇನೆಯಲ್ಲಿದ್ದ ಪಠಾಣಕೋಟ್ನ ಸಾಮಾನ್ಯ ಕುಟುಂಬದ ಜಸ್ಕೀರಟ್ ಸಿಂಗ್, ಹಂಜಾ ಹೇಗಾದ ಎಂಬುದು ಬಹಿರಂಗವಾಗುತ್ತದೆ. ಮುಂದೆ? ಹಂಜಾ ಶತ್ರುಗಳ ಶಿಕಾರಿ ಮಾಡುತ್ತಾನಾ? ಶಿಕಾರಿ ಆಗುತ್ತಾನಾ? ಸಿನಿಮಾ ನೋಡಿ.