ವಿಮಾನ ನಿಲ್ದಾಣಗಳಲ್ಲಿ ವಿಶೇಷ ಭದ್ರತೆ ಇರುತ್ತದೆ. ಸಿಐಎಸ್ಎಫ್ ಯೋಧರು ಪ್ರತಿಯೊಬ್ಬರ ಬೋರ್ಡಿಂಗ್ ಪಾಸ್ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಬಿಡುತ್ತಾರೆ. ಬಡವ, ಶ್ರೀಮಂತ ಎನ್ನದೇ ಎಲ್ಲರೂ ಸರತಿ ಸಾಲಿನಲ್ಲಿ ನಿಂತು, ಸೆಕ್ಯೂರಿಟಿ ಚೆಕ್ಗೆ ಒಳಗಾಗಿಯೇ ನಿಲ್ದಾಣದ ಒಳಗೆ ಬರಬೇಕು. ಆದರೆ, ಇತ್ತೀಚೆಗಷ್ಟೆ ಬಾಲಿವುಡ್ ನಟಿ ಕರೀನಾ ಕಪೂರ್, ಮುಂಬೈ ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲದೇ, ಜನರ ನಡುವೆಯೇ ಮುಂದಕ್ಕೆ ಬಂದು, ಸೆಕ್ಯೂರಿಟಿ ಚೆಕ್ಕಿಂಗ್ ಕೂಡ ಮಾಡಿಸಿಕೊಳ್ಳದೇ, ನೇರ ಒಳಗೆ ಪ್ರವೇಶಿಸಿದ್ದಾರೆ. ಅದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಕರೀನಾ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕೆಲವರು ಮುಂಬೈ ಏರ್ಪೋರ್ಟ್ ಸೆಕ್ಯೂರಿಟಿ ಸಿಬ್ಬಂದಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.