ನನ್ನ ಜೀವನದಲ್ಲಿ ನಾನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಅದು ಮದುವೆ: ಹಿರಿಯ ನಟಿ ಜಯಪ್ರದಾ ಶಾಕಿಂಗ್​ ಹೇಳಿಕೆ! Actress Jayaprada

ಹಿರಿಯ ನಟಿ ಜಯಪ್ರದಾ
ಹಿರಿಯ ನಟಿ ಜಯಪ್ರದಾ
Published on

ಪ್ರಮುಖ ಮುಖ್ಯಾಂಶಗಳು

  • ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ಸುಂದರ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ
  • ಇತ್ತೀಚಿನ ಸಂದರ್ಶನದಲ್ಲಿ ಸಿನಿಮಾ ಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಟಿ
  • ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗಿನ ಆತ್ಮೀಯತೆ ಬಗ್ಗೆ ಮಾತು
Actress Jayaprada : ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ಸುಂದರ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಮ್ಮ ಸಿನಿಮಾ ಜೀವನ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಇಂಟ್ರೆಸ್ಟಿಂಗ್​ ಮತ್ತು ಎಮೋಷನಲ್​ ವಿಷಯಗಳನ್ನು ಹಂಚಿಕೊಂಡರು. ಗ್ಲಾಮರ್ ಲೋಕದಲ್ಲಿ ಸ್ಟಾರ್​ ನಟಿಯಾಗಿ ಮಿಂಚಿದರು ಕೂಡ ಅವರ ವೈಯಕ್ತಿಕ ಜೀವನವು ಸಾಕಷ್ಟು ಏರಿಳಿತಗಳಿಂದ ತುಂಬಿತ್ತು ಎಂಬುದು ಜಯಪ್ರದಾ ಅವರ ಮಾತಿನಿಂದಲೇ ಸ್ಪಷ್ಟವಾಗುತ್ತದೆ.
ನಟಿ ಜಯಪ್ರದಾ ಅವರ ಸಿನಿ ಪಯಣ ಒಂದು ಪವಾಡ. 1974ರಲ್ಲಿ ತೆಲುಗಿನ ಭೂಮಿ ಕೋಸಮ್​ ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಆದರೆ, 1976ರಲ್ಲಿ ತೆಲುಗಿನಲ್ಲಿ ತೆರೆಕಂಡ ಸೀತಾ ಕಲ್ಯಾಣಂ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಮಿಂಚುವ ಮೂಲಕ ಜಯಪ್ರದಾ ಅವರಿಗೆ ಜನಪ್ರಿಯತೆ ದೊರೆಯಿತು. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಬಾಪು ಅವರು ನಿರ್ದೇಶನ ಮಾಡಿದರು. ಇದಾದ ಬಳಿಕ ತಮಿಳು ಮತ್ತು ಕನ್ನಡ ಸಿನಿಮಾಗಳಿಂದ ಆಫರ್​ಗಳ ಸುರಿಮಳೆಯಾದವು. 
ಡಾ. ರಾಜ್​ಕುಮಾರ್​ ಅಭಿನಯದ ಸನಾದಿ ಅಪ್ಪಣ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಜಯಪ್ರದಾ ಪದಾರ್ಪಣೆ ಮಾಡಿದರು ಮತ್ತು ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿದರು. ಇದಾದ ಬಳಿಕ ಹುಲಿ ಹಾಲಿನ ಮೇವು ಸಿನಿಮಾದಲ್ಲಿ ಮತ್ತೆ ರಾಜ್​ಕುಮಾರ್​ ಜತೆಯಾದರು. ಈ ಸಿನಿಮಾ ಕೂಡ ಸೂಪರ್​ ಡೂಪರ್​ ಹಿಟ್​ ಆಯಿತು. ಮತ್ತೆ ಈ ಜೋಡಿ ಕವಿರತ್ನ ಕಾಳಿದಾಸ ಸಿನಿಮಾದಲ್ಲೂ ಒಂದಾಯಿತು. ಅದು ಕೂಡ ಹಿಟ್​ ಆಯಿತು. ಆ ಬಳಿಕ ಏಕಲವ್ಯ, ಆತ್ಮ ಬಂಧನ, ಮಣಿಕಂಠನ ಮಹಿಮೆ, ಹಿಮಪಾತ, ಪ್ರೇಮ ಗೀತೆ, ಹಬ್ಬ, ಶಬ್ಧವೇದಿ, ಶ್ರೀ ರೇಣುಕಾದೇವಿ ಹಾಗೂ ಈ ಬಂಧನ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲೂ ಜಯಪ್ರದಾ ಅವರು ಬೇರೂರಿದ್ದಾರೆ. 

ಶ್ರೀದೇವಿಯನ್ನು ಮಿಸ್​ ಮಾಡಿಕೊಳ್ಳುತ್ತೇನೆ

ಒಂದು ಸಮಯದಲ್ಲಿ ಜಯಪ್ರದಾ ಮತ್ತು ಶ್ರೀದೇವಿ ನಡುವೆ ವೃತ್ತಿಪರ ಪೈಪೋಟಿ ಇತ್ತು. ಎಷ್ಟರ ಮಟ್ಟಿಗೆ ಅಂದರೆ, ಕೋಲ್ಕತದಂತಹ ನಗರಗಳಲ್ಲಿ ಅವರಿಬ್ಬರ ಅಭಿಮಾನಿಗಳು ಜಗಳವಾಡಿದ ಅನೇಕ ಸಂದರ್ಭಗಳಿವೆ. ಆದಾಗ್ಯೂ, ಶ್ರೀದೇವಿಯ ಅನುಪಸ್ಥಿತಿಯು ಈಗ ತನಗೆ ತೀವ್ರ ನೋವುಂಟುಮಾಡುತ್ತದೆ ಮತ್ತು ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಜಯಪ್ರದಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಮಿತಾಭ್​​ ಬಗ್ಗೆ ಮಾತು

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗಿನ ಆತ್ಮೀಯತೆ ಬಗ್ಗೆ ಮಾತನಾಡಿದ ಜಯಪ್ರದಾ, ಶರಬಿ ಚಿತ್ರದ ಶೂಟಿಂಗ್​ ಸಮಯದಲ್ಲಿ ಅಪರಿಚಿತನೊಬ್ಬ ನನಗೆ ಕಿರುಕುಳ ನೀಡುತ್ತಿದ್ದಾಗ, ಅಮಿತಾಭ್​ ಅವರು ಸ್ವತಃ ನನ್ನ ರಕ್ಷಣೆಗೆ ಬಂದು ನನ್ನನ್ನು ಮೇಕಪ್ ಕೋಣೆಯಲ್ಲಿ ಬಿಟ್ಟು ಹೋದರು ಎಂದು ನೆನಪಿಸಿಕೊಂಡರು. 

ನಾನು ಮಾಡಿದ ದೊಡ್ಡ ಮಿಸ್ಟೇಕ್​

ನಿಮ್ಮ ಜೀವನದಲ್ಲಿ ನೀವು ತೆಗೆದುಕೊಂಡ ತಪ್ಪು ನಿರ್ಧಾರ ಯಾವುದು? ಎಂದು ಕೇಳಿದಾಗ, ಜಯಪ್ರದಾ ಅವರು ಯಾವುದೇ ಹಿಂಜರಿಕೆಯಿಲ್ಲದೆ "ನನ್ನ ಮದುವೆ" ಎಂದು ಉತ್ತರಿಸಿದರು. ಸಿನಿಮಾ ನಟಿಯಾಗುವುದು ಒಂದು ರೀತಿಯ ಶಾಪ ಎಂದು ವಿಷಾದ ವ್ಯಕ್ತಪಡಿಸಿದರು. ಏಕೆಂದರೆ, ನಟಿಯಾಗಿ ಮದುವೆಯಾದರೆ, ನಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷಕ್ಕಿಂತ ಕೇವಲ ಅಭದ್ರತೆಯೇ ಕಾಡುತ್ತದೆ ಎಂದು ಬೇಸರ ಹೊರಹಾಕಿದರು. 
ನನ್ನ ಮಗ ಸಿದ್ಧಾರ್ಥ್ ಶೀಘ್ರದಲ್ಲೇ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಜಯಪ್ರದಾ ಇದೇ ಸಮಯದಲ್ಲಿ ದೃಢಪಡಿಸಿದರು. ನನ್ನ ಮಗನಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಇದೆ. ಈಗಾಗಲೇ ಅನೇಕ ಆಫರ್​ಗಳನ್ನು ಪಡೆಯುತ್ತಿದ್ದಾನೆ. ನನ್ನ ಮಗ ಬಾಲಿವುಡ್ ನಾಯಕನಂತೆ ಕಂಡರೂ, ಆತ ತೆಲುಗು ಸಿನಿ ಉದ್ಯಮದಿಂದ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಲು ನಾನು ಬಯಸುತ್ತೇನೆ ಎಂದು ಜಯಪ್ರದಾ ಅವರು ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net