ನಟ ವಿಶಾಲ್ ಜೇಠ್ವಾ ಹೆಸರು ಕೇಳಿದರೆ ಹೆಚ್ಚು ಜನರಿಗೆ ತಿಳಿಯದಿರಬಹುದು. ಆದರೆ, "ಮರ್ದಾನಿ 2' ಚಿತ್ರದ ವಿಲನ್, ಕಳೆದ ವರ್ಷ ಭಾರತದಿಂದ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆಯಾಗಿದ್ದ "ಹೋಮ್ಬೌಂಡ್' ಚಿತ್ರದ ನಾಯಕ, "ಸಲಾಮ್ ವೆಂಕಿ' ಚಿತ್ರದ ವೆಂಕಿ ಅಂದಾಕ್ಷಣ ಬಹುತೇಕರಿಗೆ ಗೊತ್ತಾಗುತ್ತದೆ. ಹೀಗೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಜೀವ ತುಂಬುವ ಮೂಲಕ ಜನರಿಗೆ ಹತ್ತಿರವಾಗಿರುವ ನಟ ವಿಶಾಲ್ ಜೇಠ್ವಾ. ಇಂತಹ ಪ್ರತಿಭಾವಂತ ವಿಶಾಲ್ ಕಳೆದ ವರ್ಷ ತೆರೆಕಂಡ "ಹೋಮ್ಬೌಂಡ್' ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಹಾಗಂತ ಅವರಿಗೆ ಅವಕಾಶಗಳಿಲ್ಲ ಅಂತಲ್ಲ. ಬದಲಾಗಿ ಅವರು ಕಳೆದ ಕೆಲ ತಿಂಗಳಿನಿಂದ ಹೊಸ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರಂತೆ. ಹೀಗಾಗಿ 31 ವರ್ಷದ ವಿಶಾಲ್ ಸಿನಿಮಾ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಾ ಎಂಬಂತೆ ಇತ್ತೀಚೆಗಷ್ಟೆ ಜಾಲತಾಣದಲ್ಲಿ ಅವರು ತಮ್ಮ ಎರಡೂ ಕೈಗಳಲ್ಲಿ ಆಗಿರುವ ಬೊಬ್ಬೆಗಳ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ "10 ಕೆಜಿ ತೂಕದೊಂದಿಗೆ 40 ಸೇರಿ ಒಟ್ಟು 105 ಪುಲ್&ಅಪ್ಗಳ ಪರಿಣಾಮವಿದು. ಇದಕ್ಕೆ ಯಾವುದ ಶಾರ್ಟ್ ಕಟ್ ಇಲ್ಲ' ಎಂದು ಬರೆದುಕೊಂಡಿದ್ದಾರೆ. ನಟನ ಪರಿಶ್ರಮ ಕಂಡು ನೆಟ್ಟಿಗರು ಅವರ ಬೆನ್ನುತಟ್ಟಿದ್ದು, ಹಾಗೇ ಮುಂದಿನ ಸಿನಿಮಾ ಕುರಿತು ಕುತೂಹಲವನ್ನೂ ವ್ಯಕ್ತಪಡಿಸಿದ್ದಾರೆ.