ಬಾಕ್ಸ್​ ಆಫೀಸ್​ ಹಿಟ್​​ ಬೆನ್ನಲ್ಲೇ 7 ತಾಸಿನ 'ಧುರಂಧರ್' ತೆರೆಗೆ? ಏನಿದು ನಿರ್ಮಾಪಕರ ಲಾಭದ ಲೆಕ್ಕಾಚಾರ? | Dhurandhar​

ಧುರಂಧರ್​ 2
ಧುರಂಧರ್​ 2
Published on

ಪ್ರಮುಖ ಮುಖ್ಯಾಂಶಗಳು

  • 'ಧುರಂಧರ್'​ ಒಂದನೇ ಮತ್ತು 2ನೇ ಭಾಗ ಸೂಪರ್​ಹಿಟ್​
  • ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಸಿನಿಮಾ
  • ಅತಿ ಹೆಚ್ಚಿನ ರನ್​ಟೈಮ್​ ಚಿತ್ರವನ್ನು ಮೆಚ್ಚಿದ ಸಿನಿರಸಿಕರು
  • ದೇಶಿಯ, ಜಾಗತಿಕ ಬಾಕ್ಸ್ ಆಫೀಸ್​ ಹಿಟ್​ ಬೆನ್ನಲ್ಲೇ ಮತ್ತೊಂದು ಗೆಲುವಿನತ್ತ ನಿರ್ಮಾಪಕರ ಲೆಕ್ಕಾಚಾರ
ಮುಂಬೈ: ಆದಿತ್ಯ ಧರ್ ನಿರ್ದೇಶನದ ಹಾಗೂ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಭಾಗ 1,2 ಚಿತ್ರಗಳು ದೇಶಿಯ ಮತ್ತು ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಭಾರೀ ಯಶಸ್ಸನ್ನು ಕಂಡಿವೆ. ಕೇವಲ ಲಾಭದ ವಿಚಾರದಲ್ಲಿ ಮಾತ್ರವಲ್ಲ, ಸಿನಿಮಾದ ಕಥೆ, ದೃಶ್ಯಗಳು ಮತ್ತು ಮೇಕಿಂಗ್​ ಅನ್ನು ಕೊಂಡಾಡಿರುವ ನೋಡುಗರು, ಬರೋಬ್ಬರಿ 3 ಗಂಟೆ 49 ನಿಮಿಷಗಳ ಚಿತ್ರವನ್ನು ಸಂಪೂರ್ಣವಾಗಿ ಚಿತ್ರಮಂದಿರದಲ್ಲಿ ಕುಳಿತು ವೀಕ್ಷಿಸಿದ್ದಾರೆ.
ಪಾಕಿಸ್ತಾನದಲ್ಲಿ ಭಾರತೀಯ ಏಜೆಂಟ್​ನ ಮಾಸ್ಟರ್​ಮೈಂಡ್​ ಕಥಾವಸ್ತುವಿನೊಂದಿಗೆ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿದ ಚಿತ್ರೀಕರಿಸಲಾದ ಧುರಂಧರ್​ ಚಿತ್ರವು ಭಾರತೀಯ ಸಿನಿರಸಿಕರಿಂದ ಹೆಚ್ಚಿನ ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ಪಡೆದಿದೆ. ಕೆಲವರು ಚಿತ್ರದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸಿದ್ದಕ್ಕೆ ಭಾರೀ ಅಸಮಾಧಾನ ಹೊರಹಾಕಿದರು. ಪ್ರಚಾರದ ಉದ್ದೇಶದಿಂದ ಹೀಗೆ ಮಾಡಿರುವುದು ನಿಜಕ್ಕೂ ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದರು.
ಆದಾಗ್ಯೂ, ದುರಂಧರ್ ಎರಡೂ ಭಾಗಗಳು ದೀರ್ಘ ರನ್​ಟೈಮ್​ ಹೊಂದಿರುವ ಚಿತ್ರಗಳು ಎಂಬುದು ಇಲ್ಲಿ ಗಮನಾರ್ಹ. ಮೊದಲ ಭಾಗವು 3 ಗಂಟೆ 34 ನಿಮಿಷಗಳಷ್ಟು ಉದ್ದವಿದ್ದರೆ, ದ್ವಿತೀಯ ಭಾಗ 3 ಗಂಟೆ 49 ನಿಮಿಷಗಳಷ್ಟು ಉದ್ದವಿದೆ. ಇಷ್ಟು ದೊಡ್ಡ ರನ್​ಟೈಮ್​ ಇದ್ದರೂ ಪ್ರೇಕ್ಷಕರು ಎಲ್ಲಿಯೂ ಬೋರ್​ ಆಗದಂತೆ ತಮ್ಮ ನಿರ್ದೇಶನವನ್ನು ಅಚ್ಚುಕಟ್ಟಾಗಿ ಮಾಡಿರುವ ನಿರ್ದೇಶಕರು ಇದೀಗ ಈ ಎರಡೂ ಭಾಗವನ್ನು ಒಟ್ಟಿಗೆ ತೋರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮೊದಲೇ ಪ್ಲ್ಯಾನ್​ ಹಾಕಿಕೊಂಡಂತೆ, ಈ ಎರಡು ಭಾಗಗಳನ್ನು ಸುಮಾರು ಏಳು ಗಂಟೆ ಮೂವತ್ತು ನಿಮಿಷಗಳ ರನ್​ಟೈಮ್​ನಲ್ಲಿ ಒಂದೇ ಬಾರಿಗೆ ಚಿತ್ರಿಸಲಾಯಿತು. ಬಳಿಕ ನಿರ್ದೇಶಕರು, ಮೂರು ತಿಂಗಳ ಅಂತರದಲ್ಲಿ ಮೊದಲ ಹಾಗೂ ಎರಡನೇ ಭಾಗವನ್ನು ತೆರೆಗೆ ತರಲು ಮುಂದಾದರು. ಸಿನಿ ಮೂಲಗಳ ಪ್ರಕಾರ, ಈಗಾಗಲೇ ಎರಡು ಭಾಗದ ಎಡಿಟಿಂಗ್ ಕೂಡ ಪೂರ್ಣಗೊಂಡಿದ್ದು, ಸೆನ್ಸಾರ್ ಬಳಿಕ ಇನ್ನೂ ಕೆಲವೇ ತಿಂಗಳಲ್ಲಿ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ, ದುರಂಧರ್ 2 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ವಾರಂತ್ಯದಲ್ಲಿ ಪ್ರೇಕ್ಷಕರಿಂದ ಚಿತ್ರಮಂದಿರಗಳು ತುಂಬಿ ತುಳುಕುತ್ತಿದೆ.
ಅಸಲಿಗೆ, 'ದುರಂಧರ್‌' ಪೂರ್ಣ ಚಿತ್ರದ ಕಥೆಯೇನು? ನಿಜಕ್ಕೂ 7 ಗಂಟೆ 35 ನಿಮಿಷಗಳ ಸಿನಿಮಾ ಥಿಯೇಟರ್​ಗೆ ಕಾಲಿಡಲಿದೆಯಾ? ಎಂಬುದರ ಬಗ್ಗೆ ಚಿತ್ರತಂಡದಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಂಗಳವಾರದ ( ಮಾ.31) ಅಂತ್ಯಕ್ಕೆ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಚಿತ್ರವು 1,435 ಕೋಟಿ ರೂ. ಗಳಿಕೆ ಕಂಡಿದೆ. ಇದೇ ರೀತಿ ಉತ್ಸಾಹದ ಪ್ರದರ್ಶನ ಮುಂದುವರೆದರೆ, ಶೀಘ್ರವೇ 'ಧುರಂಧರ್​ 2' 2000 ಕೋಟಿ ರೂ. ಕ್ಲಬ್​ ಸೇರಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net