

ಮುಂಬೈ: ಬಾಲಿವುಡ್ ಹಿರಿಯ ನಟರಾಗಿದ್ದ ಹಾಗೂ ಬಿಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ನಟಿಸಿದ್ದ ಸತೀಶ್ ಕೌಲ್ (66) ಅವರು ಇಂದು ಪಂಜಾಬ್ನ ಲೂದಿಯಾನದಲ್ಲಿ ನಿಧನರಾಗಿದ್ದಾರೆ.
ಅವರು ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದರು ಎಂದು ಲೂದಿಯಾನದ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
1954 ರಲ್ಲಿ ಕಾಶ್ಮಿರದಲ್ಲಿ ಜನಿಸಿದ್ದ ಸತೀಶ್ ಕೌಲ್ ಅವರು ಸುಮಾರು 300 ಹಿಂದಿ ಚಿತ್ರಗಳಲ್ಲಿ ಹಾಗೂ ಅನೇಕ ಪಂಜಾಬಿ ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟಿಸಿದ್ದರು. ಕರ್ಮ, ಪ್ರೇಮ ಭಾರತ್, ವಾರಂಟ್, ಗುನಾಹೋ ಕಾ ಪೈಸ್ಲಾ, ಭಕ್ತಿ ಮೇ ಶಕ್ತಿ ಹಾಗೂ ಡ್ಯಾನ್ಸ್ ಡ್ಯಾನ್ಸ್ ಅವರು ನಟಿಸಿದ್ದ ಪ್ರಮುಖ ಸಿನಿಮಾಗಳು. ಅಲ್ಲದೇ ಅವರು ಮುಂಬೈನಲ್ಲಿ ನಟನಾ ಶಾಲೆಯೊಂದನ್ನೂ ಸಹ ತೆರದಿದ್ದರು.
ಕಳೆದ ವರ್ಷ ಲಾಕ್ಡೌನ್ನಿಂದ ಜೀವನ ನಿರ್ವಹಣೆಗೆ ತೊಂದರೆ ಆಗಿದೆ ಎಂದು ಈ ನಟ ಹೇಳಿ ಕೊಂಡಿದ್ದರು. ಹೀಗಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 5 ಲಕ್ಷ ರೂಪಾಯಿ ಸಹಾಯಧನ ನೀಡಿದ್ದರು.