ಇಂದಿನಿಂದ ನಾವು ಹೀಗೆಯೇ ಇರೋದು! ಬಾಲಿವುಡ್​ನ ಹಾಟ್​ ಬ್ಯೂಟಿಗಳ ಶಪಥ, ನುಡಿದಂತೆ ನಡೆಯಲು ಸಿದ್ಧ | Resolutions

ವಿಜಯವಾಣಿ - 2025-01-26T141135.252
Published on

Resolutions: ಭಾರತೀಯ ಚಲಚಿತ್ರೋದ್ಯಮದಲ್ಲಿ ತಮ್ಮ ನಟನಾ ಕೌಶಲ್ಯಕ್ಕಿಂತ ಹೆಚ್ಚಾಗಿ ದೇಹ ಸೌಂದರ್ಯದಿಂದಲೇ ಭಾರೀ ಸದ್ದು ಮಾಡುವ ಬಾಲಿವುಡ್​ ಬ್ಯೂಟೀಸ್​, ಈ ವರ್ಷದಲ್ಲಿ ತಾವೇನು ಮಾಡಬೇಕು? ಹೇಗಿರಬೇಕು ಎಂಬುದನ್ನು ಈಗಾಗಲೇ ದೃಢವಾಗಿ ನಿರ್ಧರಿಸಿದ್ದಾರೆ. ಹೊಸ ವರ್ಷ ಬಂದಾಯ್ತು, ಮೊದಲ ತಿಂಗಳ ಅಂತ್ಯಕ್ಕೆ ದಿನಗಣನೆಯೂ ಶುರುವಾಗಿದೆ. ಇಂದಿಗೂ ಸಹ ಅನೇಕರು ಹೊಸ ನಿರ್ಣಯಗಳನ್ನು ಹಾಕಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಸದ್ಯ ಈ ಸಾಲಿನಲ್ಲಿ ಬಾಲಿವುಡ್​ ಚಿತ್ರರಂಗದ ಹಾಟ್​ ನಟಿಯರು ಕೂಡ ಮುಂಚೂಣಿಯಲ್ಲಿದ್ದಾರೆ.

ಬಾಲಿವುಡ್​ ಅಂಗಳದಲ್ಲಿ ತಮ್ಮದೇ ಹೆಸರು ಸ್ಥಾಪಿಸಿಕೊಂಡಿರುವ ಮಲೈಕಾ ಅರೋರಾ, ದಿಶಾ ಪಟಾನಿ, ರಾಕುಲ್ ಪ್ರೀತ್ ಸಿಂಗ್, ಜಾಕ್ವಲಿನ್ ಫೆರ್ನಾಂಡಿಸ್​ ಮತ್ತು ಕಿಯಾರಾ ಅಡ್ವಾನಿ ಈ ವರ್ಷ ಹೊಸ ನಿರ್ಣಯಗಳನ್ನು ಹಾಕಿಕೊಂಡಿದ್ದು, ಅದನ್ನು ಪಾಲಿಸಲು ಒತ್ತು ನೀಡುತ್ತೇವೆ ಎಂದು ತಮ್ಮಲ್ಲೇ ತಾವು ಶಪಥ ಹಾಕಿಕೊಂಡಿದ್ದಾರೆ. ತಾವು ತೆಗೆದುಕೊಂಡಿರುವ ನಿರ್ಣಯಗಳೇನು ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇನ್ಮುಂದೆ ಇದ್ಯಾವುದನ್ನೂ ತಿನ್ನೋದಿಲ್ಲ

ಈ ವರ್ಷ ನಾನು ಮತ್ತು ನನ್ನ ಪತಿ ಹೊಸ ವರ್ಷದ ಆಚರಣೆಗಾಗಿ ಲಂಡನ್‌ಗೆ ಹೋಗಿದ್ದೆವು. ಹಲವು ವರ್ಷಗಳಿಂದ ನಾನು ಅನೇಕ ರಜೆಗಳಲ್ಲಿದ್ದೆ. ಎಲ್ಲಿಗೆ ಹೋದರೂ, ನನಗೆ ರುಚಿಯಾದ ಮತ್ತು ನೆಚ್ಚಿನ ಆಹಾರಗಳನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗಲಿಲ್ಲ. ಕಾರಣ ತೂಕ ಹೆಚ್ಚಾಗುವ ಭಯ. ಆದರೆ ಈ ಬಾರಿ, ಹೊಸ ವರ್ಷದ ರಜೆಯಲ್ಲಿ, ನಾನು ನನ್ನ ನೆಚ್ಚಿನ ಆಹಾರವನ್ನು ನನ್ನ ಹೃದಯಕ್ಕೆ ತೃಪ್ತಿಯಾಗುವಷ್ಟು ತಿಂದಿದ್ದೇನೆ. ಅದು ನನಗೆ ತುಂಬಾ ಸಂತೋಷ ನೀಡಿದೆ. ನನ್ನಂತೆಯೇ ಯೋಚಿಸುವ ಹುಡುಗಿಯರಿಗೆ ನಾನು ಹೇಳಲು ಬಯಸುವ ಒಂದೇ ಒಂದು ವಿಷಯವಿದು. ನಿಮ್ಮ ಭಯ ಮತ್ತು ತಪ್ಪು ಕಲ್ಪನೆಗಳನ್ನು ಬದಿಗಿಟ್ಟು, ನೀವು ಇಷ್ಟಪಡುವ ಆಹಾರವನ್ನು ಆನಂದಿಸಿ. ಮತ್ತೆ ಫಿಟ್‌ನೆಸ್‌ನತ್ತ ಗಮನಹರಿಸಿ. ಈ ವರ್ಷವನ್ನು ನೆಚ್ಚಿನ ಆಹಾರ ತಿನ್ನುವ ಮೂಲಕ ಪೂರ್ಣವಾಗಿ ಆನಂದಿಸಲು ನಾನು ದೃಢವಾಗಿ ನಿರ್ಧರಿಸಿದ್ದೇನೆ ಎಂದಿದ್ದಾರೆ ನಟಿ ರಾಕುಲ್ ಪ್ರೀತ್ ಸಿಂಗ್.

ಹೆತ್ತವರೊಂದಿಗೆ ಸಮಯ

ಪ್ರತಿ ವರ್ಷ ನಾನು ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇನೆ. ಕಳೆದ ಎರಡು, ಮೂರು ವರ್ಷಗಳಲ್ಲಿ ಹೆಚ್ಚಾಗಿ ನಾನು ಧ್ಯಾನದತ್ತ ಗಮನ ಹರಿಸಿದ್ದೇನೆ. ನಾನು ಸಸ್ಯಾಹಾರಿಯೂ ಆಗಿದ್ದೇನೆ. ಈ ವರ್ಷ, ನಾನು ನನ್ನ ಕುಟುಂಬಕ್ಕೆ ಆದ್ಯತೆ ನೀಡಲು ಬಯಸಿರುವೆ. ನನ್ನ ಹೆತ್ತವರು ವಯಸ್ಸಾಗುತ್ತಿದ್ದಾರೆ. ಈ ಸಮಯದಲ್ಲಿ ಅವರಿಗೆ ನನ್ನ ಅವಶ್ಯಕತೆ ತುಂಬಾ ಇದೆ. ಹೀಗಿರುವ ಕಾರಣ, ನಾನು ಅವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಲು ಬಯಸುತ್ತೇನೆ ಎಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.

ಟೀಕೆಗಳಿಗೆ ಕಿಮ್ಮತ್ತಿಲ್ಲ

ತಮ್ಮ ಸಾಮರ್ಥ್ಯಗಳನ್ನು ಮೀರಿ ಯೋಚಿಸುವುದು ಸರಿಯಲ್ಲ. ನಾವು 100% ಮಾಡ್ತೀವಿ ಎಂಬ ನಂಬಿಕೆಯಿರುವ ವಿಷಯಗಳಿಗೆ ಮಾತ್ರ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ನಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನವನ್ನು ಆನಂದಿಸಲು ಸಾಧ್ಯ. ಟೀಕೆಗಳನ್ನು ನಿರ್ಲಕ್ಷಿಸಿ ಈ ವರ್ಷ ಸಕಾರಾತ್ಮಕತೆಯೊಂದಿಗೆ ಮುಂದುವರಿಯುವ ಗುರಿಯನ್ನು ನಾನು ಹೊಂದಿರುವೆ. ನಾನು ನಿಯಮಿತವಾಗಿ ವ್ಯಾಯಾಮ ಮಾಡಲು ಮತ್ತು ನನ್ನ ಪತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದೇನೆ ಎಂದು ನಟಿ ಕಿಯಾರಾ ಅಡ್ವಾಣಿ ತಿಳಿಸಿದ್ದಾರೆ.

ನನ್ನ ಗುರಿಯೇ ಟಾರ್ಗೆಟ್​

ನಾನು ನನ್ನ ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ವೈಯಕ್ತಿಕ ಮತ್ತು ವೃತ್ತಿ ಅಭಿವೃದ್ಧಿಯನ್ನು ಸಾಧಿಸುವುದೇ ಈಗ ನನ್ನ ಗುರಿ. ಅದರ ಭಾಗವಾಗಿ, ನಾನು ಶಕ್ತಿಯುತ ಮತ್ತು ಸುಂದರವಾಗಿರುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಎಂದಿನಂತೆ ನೀಡುತ್ತೇನೆ. ನಾನು ಜ್ಯೋತಿಷ್ಯವನ್ನು ನಂಬುತ್ತೇನೆ. ನನ್ನ ರಾಶಿಚಕ್ರ ಚಿಹ್ನೆ ವೃಶ್ಚಿಕ. ಇದರ ಪ್ರಕಾರ, ಈ ವರ್ಷ ನಾನು ಸಕಾರಾತ್ಮಕತೆಯಿಂದ ಸಂತೋಷ ಮತ್ತು ಆರೋಗ್ಯವಾಗಿರುತ್ತೇನೆ. ನನ್ನ ಜಾತಕವು ನಾನು ಆರ್ಥಿಕವಾಗಿಯೂ ಯಶಸ್ವಿಯಾಗಿರುವೆ ಎಂದು ಹೇಳಿದೆ. ಆದ್ದರಿಂದ ಹಿಂತಿರುಗಿ ನೋಡುವ ಮಾತಿಲ್ಲ ಎಂದು ಹಿರಿಯ ನಟಿ ಮಲೈಕಾ ಅರೋರಾ ಹೇಳಿದ್ದಾರೆ.

ಪ್ರಪಂಚ ಸುತ್ತುವೆ

ಕಳೆದ ಕೆಲವು ವರ್ಷಗಳಿಂದ ನಾನು ಬೆರಳೆಣಿಕೆಯಷ್ಟು ಸಿನಿಮಾಗಳನ್ನು ನೋಡುತ್ತಿದ್ದೇನೆ. ಆದರೂ ಇಷ್ಟಪಟ್ಟ ಜಾಗಕ್ಕೆ ಹೋಗಲು ಸಮಯವಿಲ್ಲ. ಬಿಡುವ ಸಿಗುತ್ತಿಲ್ಲ. ಅದಕ್ಕಾಗಿಯೇ ಈ ವರ್ಷವನ್ನು ಸಂಪೂರ್ಣವಾಗಿ ಪ್ರಯಾಣಕ್ಕೆ ಮೀಸಲಿಡಲು ನಿರ್ಧರಿಸಿದ್ದೇನೆ. ನಾನು ಏಕಾಂಗಿಯಾಗಿ ಪ್ರಪಂಚ ಸುತ್ತಲು ನಿರ್ಧರಿಸಿರುವೆ. ನಾನು ವಿವಿಧ ಪ್ರದೇಶಗಳು ಮತ್ತು ದೇಶಗಳಿಗೆ ಪ್ರಯಾಣಿಸಲು ಹಾಗೂ ಹೊಸ ಸಂಸ್ಕೃತಿಗಳ ಬಗ್ಗೆ ಅರಿತುಕೊಳ್ಳಲು ಬಯಸುತ್ತೇನೆ. ಅಲ್ಲದೆ, ನಾನು ಎಷ್ಟೇ ಬಿಜಿಯಾಗಿದ್ದರೂ ಪ್ರತಿದಿನ ನನಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲು ನಿರ್ಧರಿಸಿದ್ದೇನೆ. ನಾನು ಇಷ್ಟಪಡುವ ಕೆಲಸಗಳನ್ನು ಮಾಡುತ್ತೇನೆ. ನನ್ನ ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೇನೆ. ಇದು ನನ್ನಲ್ಲಿ ಸಕಾರಾತ್ಮಕತೆ ಮತ್ತು ಸ್ವ-ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ನಾನು ನಂಬಿರುವೆ ಎಂದು ದಿಶಾ ಪಟಾನಿ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net