ರೈಲು ಹತ್ತುವುದೇ ಸಾಹಸ !

train
ಸೂಕ್ತ ಮೇಲ್ಸೇತುವೆ ಇಲ್ಲದಿರುವ ಬಾರ್ಕೂರು ರೈಲ್ವೆ ನಿಲ್ದಾಣ
Published on

ಶಿವರಾಮ ಆಚಾರ್ಯ ಬಂಡೀಮಠ ಬ್ರಹ್ಮಾವರ

ದೇವಾಲಯಗಳಿಗೆ ಹೆಸರಾದ ಬಾರ್ಕೂರು ಸಹಿತ ಸುತ್ತಮುತ್ತಲ ಊರುಗಳಿಗೆ ಬರುವ ಪ್ರಯಾಣಿಕರು, ಪ್ರವಾಸಿಗರು ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ಸೂಕ್ತ ಪ್ಲಾಟ್‌ಫಾರಂ ಹಾಗೂ ಮೇಲ್ಸೇತುವೆ ಇಲ್ಲದೆ ನಿತ್ಯವೂ ಪರದಾಡುತ್ತಿದ್ದಾರೆ.

ಬಾರ್ಕೂರು ರೈಲ್ವೆ ನಿಲ್ದಾಣ ಮಾರ್ಗವಾಗಿ ಮುಂಬೈ- ಮಂಗಳೂರು ಮತ್ಯಗಂಧ, ಬೆಂಗಳೂರು- ಯಶವಂತಪುರ ಕಾರವಾರ, ಮಂಗಳೂರು ಕಾರವಾರ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್ ಸಹಿತ ಹಲವಾರು ರೈಲುಗಳು ಸಂಚರಿಸುತ್ತಿವೆ. ಈ ರೈಲ್ವೆ ನಿಲ್ದಾಣದಿಂದ ತೆಕ್ಕಟ್ಟೆ, ಕೋಟ, ಬ್ರಹ್ಮಾವರ, ಹೆಬ್ರಿ, ಉಪ್ಪೂರು ಸಹಿತ ರಾಜ್ಯದ ಹಲವು ಭಾಗಗಳಿಗೆ ಜನರು ಸಂಚರಿಸುತ್ತಿದ್ದು, ಪ್ಲಾಟ್‌ಫಾರಂ ಕೊರತೆಯಿಂದಾಗಿ ರೈಲುಗಳು ಸೂಕ್ತವಾಗಿ ನಿಲುಗಡೆಯಾಗದೇ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ರೈಲು ಹಿಡಿಯುವುದು ಬಾರ್ಕೂರು ಸಹಿತ ಸುತ್ತಮುತ್ತಲ ಜನತೆಗೆ ಸಾಹಸದ ಕಾರ್ಯವಾಗಿದ್ದು, ರೈಲು ಹತ್ತುವಾಗ ಹಾಗೂ ಏರುವಾಗ ಕೆಳಗಡೆ ಬೀಳುವ ಘಟನೆಗಳು ಈಗಾಗಲೇ ಹಲವು ಬಾರಿ ನಡೆದಿವೆ. ಜತೆಗೆ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆಯೂ ಬಹು ದೊಡ್ಡದಾಗಿದೆ. ಈಗಾಗಲೇ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಸಂಘ, ಸಂಘಟನೆಗಳ ಸಹಿತ ಬಾರ್ಕೂರು ಜನತೆ ಸಂಪರ್ಕಿಸಿದ್ದು, ಪ್ಲಾಟ್‌ಫಾರಂ, ಮೇಲ್ಸೇತುವೆ ಸಹಿತ ಮೂಲಸೌಕರ್ಯ ಕಲ್ಪಿಸಲು ಮನವಿ ಮಾಡಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತಿಕ್ರಿಯೆ ರಹಿತರಾಗಿದ್ದು, ಬೈಂದೂರು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ವ್ಯವಸ್ಥೆಗಳು ಕಲ್ಪಿಸುವಂತೆ ಜನತೆ ಆಗ್ರಹಿಸಿದ್ದಾರೆ.

ಪ್ರಯಾಣಿಕರಿಗೆ ಅಪಾಯ

ಬಾರ್ಕೂರು ರೈಲ್ವೆ ನಿಲ್ದಾಣದ ಪೂರ್ವ ದಿಕ್ಕಿನಲ್ಲಿ ಪ್ಲಾಟ್‌ಫಾರಂ ನಿರ್ಮಾಣವಾಗಬೇಕಿದ್ದು, ಕ್ರಾಸಿಂಗ್ ವೇಳೆ ಎರಡೂ ಕಡೆಗಳಿಂದ ರೈಲು ಸಂಚರಿಸುವ ಆತಂಕವಿದ್ದು, ಈ ಸಂದರ್ಭ ಪ್ರಯಾಣಿಕ ರೈಲಿನಡಿ ಸಿಲುಕುವ ಅಪಾಯವೂ ಇದೆ. ಈ ಕಾರಣದಿಂದ ಎರಡೂ ಕಡೆಗೆ ಮೇಲ್ಸೇತುವೆ ಅಗತ್ಯವಿದೆ.

ಬಂಡೆಗಳ ಜಿಗಿಯುವ ದುಸ್ಥಿತಿ

ಪೂರ್ವ ಭಾಗದಲ್ಲಿ ಪ್ಲಾಟ್‌ಫಾರಂ ಇಲ್ಲವಾಗಿದ್ದು, ಮಳೆ ಬಿಸಿಲಿನ ಅನಿವಾರ್ಯತೆ ನಡುವೆ ಜನತೆ ಕಲ್ಲು ಬಂಡೆಗಳನ್ನು ಜಿಗಿದು ಬರಬೇಕಾದಂತಹ ಪರಿಸ್ಥಿತಿ ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿದೆ.

ಬಾರ್ಕೂರಿನಲ್ಲಿ ಕೆಲವು ರೈಲು ನಿಲುಗಡೆಗೊಳಿಸಲು ಈಗಾಗಲೇ ಅನೇಕ ಬಾರಿ ಹೋರಾಟ ನಡೆಸಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕಾಗಿ ಪ್ಲಾಟ್‌ಫಾರಂ ಹಾಗೂ ಮೇಲ್ಸೇತುವೆ ಅಗತ್ಯವಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಸಮಸ್ಯೆ ಮನವರಿಕೆ ಮಾಡುವುದರೊಂದಿಗೆ ಮನವಿ ನೀಡಲಾಗಿದೆ. ಶೀಘ್ರವೇ ಕ್ರಮಕೈಗೊಳ್ಳುವ ಭರವಸೆ ಇದೆ.-ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರೈಲು ಪ್ರಯಾಣಿಕರ ಹೋರಾಟ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net