

ಬೆಂಗಳೂರು: ಮೋಜಿನ ಜೀವನ ನಡೆಸಲು ಮನೆ ಕಳವು ಮತ್ತು ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ನವೀನ್ ಕುಮಾರ್ (22), ಸೂರ್ಯ(25) ಬಂಧಿತರು. ಆರೋಪಿಗಳಿಂದ 7.5 ಲಕ್ಷ ರೂ.ಮೌಲ್ಯದ 123 ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ನಂತರ ತಮ್ಮ ಮೋಜಿನ ಜೀವನಕ್ಕಾಗಿ ಮತ್ತು ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ರಾತ್ರಿ ವೇಳೆಯಲ್ಲಿ ಬೀಗ ಹಾಕಿದ ಮನೆಯ ಬಾಗಿಲಿನ ಪಕ್ಕದಲ್ಲಿರುವ ಕಿಟಕಿ ಗಾಜನ್ನು ಹೊಡೆದು ಕಿಟಕಿ ಮೂಲಕ ಕೈ ಹಾಕಿ ಬಾಗಿಲಿನ ಲಾಕ್ ತೆಗೆದು ಮನೆ ಒಳಗೆ ನುಗ್ಗಿ ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದರು. ನಂತರ ಆ ಚಿನ್ನಾಭರಣವನ್ನು ಚಿನ್ನ ಅಡಮಾನದ ಸಂಸ್ಥೆಗಳಲ್ಲಿ ಅಡಮಾನವಿಟ್ಟು ಬಳಿಕ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದರು.
ಬಂಧಿತ ಆರೋಪಿಗಳು ಮನೆಯಲ್ಲಿಟ್ಟಿದ್ದ ಮತ್ತು ಮಾಲೂರಿನ ಮೂತ್ತೂಟ್ ಸಂಸ್ಥೆಯಲ್ಲಿ ಅಡಮಾನ ಇಟ್ಟಿದ್ದ ಮತ್ತು ಮಾರಾಟ ಮಾಡಿದ್ದ ಒಟ್ಟು 123 ಗ್ರಾಂ ಚಿನ್ನಾಭರಣವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.