

ಬೆಂಗಳೂರು: ಎರಡೇ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಂಬವೊಂದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದು ತಾಯಿ ಮಗು ಮೃತಪಟ್ಟ ಘಟನೆ ನಡೆದಿತ್ತು. ಆ ಘಟನೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಭೂಮಿ ಒಮ್ಮಿಂದೊಮ್ಮೆಲೆ ಕುಸಿದ ಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಬಿಎಂಆರ್ಸಿಎಲ್ ಎಂಡಿ ಆಗಿರುವ ಅಜುಂ ಪರ್ವೇಜ್ ಹೇಳಿಕೆ ನೀಡಿದ್ದು ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಸಿಂಕ್ ಹೋಲ್ ಬ್ರಿಗೇಡ್ ರಸ್ತೆಯ ಮೆಟ್ರೋ ಮಾರ್ಗದ ಬಳಿ ಸೃಷ್ಟಿಯಾಗಿದೆ. ಬ್ರಿಗೇಡ್ ರಸ್ತೆಯ ಬಳಿ ಇರುವ ಟ್ರಿನಿಟಿ ಸರ್ಕಲ್ನಿಂದ ಶಿವಾಜಿನಗರದವರೆಗೂ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು ಶಿವಾಜಿನಗರದಿಂದ ಎರಡನೇ ಹಂತದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ.
ಈ ಬಗ್ಗೆ ಮೆಟ್ರೋ ಎಂಡಿ ಅಜುಂ ಪರ್ವೇಜ್ ಹೇಳಿಕೆ ನೀಡಿದ್ದು 'ನಾಲ್ಕು ದಿನದ ಹಿಂದೆ ಟಿಬಿಎಂ ಆ ಜಾಗದಿಂದ ಹಾದು ಹೋಗಿದೆ. ಟಿಬಿಎಂ ಹಾದು ಹೋದ ಜಾಗದಲ್ಲಿ ಕಾಂಕ್ರಿಟ್ ಪಿಲ್ಲರ್ ಕೂಡ ಹಾಕಲಾಗಿದೆ. ತಕ್ಷಣವೇ ಘಟನಾ ಸ್ಥಳದಲ್ಲಿ ಕಾಂಕ್ರಿಟ್ ಹಾಕಲಾಗುವುದು. ಆತಂಕ ಒಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.