

ಭಟ್ಕಳ: ಪಟ್ಟಣದ ಕೋಕ್ತಿನಗರದ ಕೆರೆಗೆ ಮಂಗಳವಾರ ಬೆಳಿಗ್ಗೆ ಒಂದೆ ಸಮನೆ ರಕ್ತ ಮಿಶ್ರಿತ ನೀರು ಹರಿದು ಬರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯದವರು ಮನೆಯಲ್ಲಿ ಪ್ರಾಣಿ ವಧೆ ನಡೆಸಿ ರಕ್ತವನ್ನು ಇನ್ನೂ ಸಂಪೂರ್ಣಗೊಳ್ಳದ ಚರಂಡಿಗೆ ಹರಿಬಿಟ್ಟಿರುವದು ಸ್ಥಳದಲ್ಲಿ ಅಶಾಂತಿಗೆ ಕಾರಣವಾಗಿದೆ.
ಬಂದರ್ ರೋಡ್ 2ನೇ ಕ್ರಾಸ್, ಕೋಕ್ತಿನಗರದ ಅಕ್ಕಪಕ್ಕದ ಮನೆಯಿಂದ ಜಾನುವಾರುಗಳ ರಕ್ತ ಚರಂಡಿಯಲ್ಲಿ ನೀರಿನಂತೆ ಹರಿದಿದೆ. ಬಂದರ ರಸ್ತೆಯಲ್ಲಿ ಕೋಕ್ತಿ ನಗರದ ಅಕ್ಕಪಕ್ಕದಲ್ಲಿ ಇನ್ನೂ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಅದನ್ನು ಸಾರ್ವಜನಿಕರಿಗೆ ಬಳಸಲು ಅನುವು ಮಾಡಿಕೊಟ್ಟಿಲ್ಲ. ಅಲ್ಲದೆ ಅದನ್ನು ಇನ್ನೂ ತನಕ ಪುರಸಭೆಗೂ ಒಳಚರಂಡಿ ಇಲಾಖೆ ಹಸ್ತಾಂತರಿಸಿಲ್ಲ. ಆದರೆ ಅಷ್ಟರಲ್ಲಿ ಯಾವುದೊ ಮನೆಯವರೂ ಪ್ರಾಣಿ ವಧೆ ಮಾಡಿ ರಕ್ತವನ್ನು ಚರಂಡಿಯಲ್ಲಿ ಹರಿ ಬಿಟ್ಟಿದ್ದು, ಇದರಿಂದ ಮಳೆ ನೀರಿನೊಂದಿಗೆ ರಕ್ತವೂ ಕೋಕ್ತಿ ಕೆರೆ ಸೇರಿ ಬಿಗುವಿನ ವಾತಾವರಣ ನಿರ್ವಣವಾಗಿತ್ತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಸದಸ್ಯರು ಜಮಾಗೊಂಡಿದ್ದಾರೆ. ರಕ್ತವೂ ನೀರಿನಲ್ಲಿ ಹರಿಯುತ್ತಿರುವದನ್ನು ಕಂಡು ಸಾರ್ವಜನಿಕರು ಕೋಕ್ತಿ ಕೆರೆ ನೀರು ಮಲಿನಗೊಳಿಸಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಮುದಾಯದ ವಿಶೇಷವಾಗಿ ಗೊಂಡ ಸಮುದಾಯದವರು ಪೂಜ್ಯ ಭಾವನೆಯಿಂದ ನೋಡುವ ಕೆರೆ ಮಲೀನಗೊಂಡಿರುವದು ಧಾರ್ವಿುಕ ಭಾವನೆಗೆ ಧಕ್ಕೆ ತಂದಿರುವುದು ಸ್ಥಳದಲ್ಲಿ ಬಿಗುವಿನ ವಾತವರಣ ಏರ್ಪಟ್ಟಿದೆ. ಸ್ಥಳಕ್ಕೆ ತಕ್ಷಣ ಪುರಸಭೆಯ ಅಧಿಕಾರಿಗಳು, ಒಳಚರಂಡಿ ಇಲಾಖೆ ಅಧಿಕಾರಿಗಳು ದೌಡಾಯಿಸಿ ಮೊದಲು ರಕ್ತ ಮಿಶ್ರೀತ ನೀರು ಕೆರೆಗೆ ಹರಿಯುವುದನ್ನು ತಪ್ಪಿಸಿದ್ದಾರೆ. ಬಳಿಕ ಚರಂಡಿಯಲ್ಲಿ ಜಮಾಗೊಂಡ ಮಲೀನ ನೀರನ್ನು ಟ್ಯಾಂಕರ್ ಮೂಲಕ ಬೆರೆಡೆಗೆ ಸಾಗಿಸಿ ತಪ್ಪು, ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಯವ ಭರವಸೆ ನೀಡಿದ್ದಾರೆ.
ಡಿವೈಎಸ್ಪಿ ಮಹೇಶ ಎಂ.ಕೆ., ನಗರ ಠಾಣೆ ಪಿಎಸ್ಐ, ಎಎಸ್ಐ ಸೇರಿ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತಂಜೀಂ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಸ್ಥಳಕ್ಕೆ ಆಗಮಿಸಿ ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಕೋಕ್ತಿ ನಗರಕ್ಕೆ ಮಲೀನ ನೀರು ಹರಿದಿರುವ ಕುರಿತು ಆತಂಕ ವ್ಯಕ್ತಪಡಿಸಿದ ಅವರು ಕೋಕ್ತಿ ನಮ್ಮೆಲ್ಲರ ನೀರಿನ ಆಸರೆಯ ಕೇಂದ್ರ. ಇದೆ ನೀರು ಬಾವಿಗೆ ಸೇರುತ್ತದೆ. ಇಂತಹದನ್ನು ಮಲೀನ ಗೊಳಿಸಿರುವದು ಅಪರಾಧ. ಪುರಸಭೆ ಸೂಕ್ತ ಕ್ರಮ ಕೈಗೊಂಡು ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹಿರಿಯ ಆರೋಗ್ಯಾಧಿಕಾರಿ ಸೊಜಿಯಾ ಸುಮನ್ಗೆ ಹೇಳಿದರು.
ಮಾಜಿ ಯೋಧ ಶ್ರೀಕಾಂತ ನಾಯ್ಕ, ಪರಮೇಶ್ವರ ಗೊಂಡ ಸೇರಿದಂತೆ ನೂರಾರು ಸಂಖ್ಯೆಯ ಗೊಂಡ ಸಮಾಜದ ಜನರು ಇದ್ದರು.