ನನೆಗುದಿಗೆ ಬಿದ್ದ ಬ್ಲ್ಯಾಕ್‌ಸ್ಪಾಟ್ ಸರ್ವೇ ಆದೇಶ?: ಕಡತದಲ್ಲಿಯೇ ಉಳಿಯಿತೇ ಮಂಡ್ಯ ಜಿಲ್ಲಾಧಿಕಾರಿ ಸೂಚನೆ ಪತ್ರ

Blackspot survey failed mandya
Published on

ಮಂಡ್ಯ: ಜಿಲ್ಲೆಯಲ್ಲಿ ನಾಲೆ ದುರಂತ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಮಂಗಳವಾರ ಪಾಂಡವಪುರ ತಾಲೂಕಿನಲ್ಲಿ ಐವರು ಜಲಸಮಾಧಿಯಾಗಿದ್ದಾರೆ. ಆದರೆ ಇಂತಹ ಘಟನೆ ನಡೆಯದಂತೆ ತೆಗೆದುಕೊಳ್ಳಬೇಕಾದ ಕ್ರಮ ಮಾತ್ರ ಶೂನ್ಯ.
ಇದೇ ವರ್ಷ ಜುಲೈ ಅಂತ್ಯದಲ್ಲಿ ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ನಾಲೆಗೆ ಕಾರು ಬಿದ್ದು ಐವರು ಮೃತಪಟ್ಟ ಪ್ರಕರಣದ ವೇಳೆ ಬ್ಲ್ಯಾಕ್‌ಸ್ಪಾಟ್ ಸರ್ವೇಗೆ ಜಿಲ್ಲಾಧಿಕಾರಿ ನೀಡಿದ ಸೂಚನೆ ಕಡತದಲ್ಲಿಯೇ ಭದ್ರವಾಗಿ ಉಳಿಯಿತೇ ಎನ್ನುವ ಅನುಮಾನ ಕಾಡುತ್ತಿದೆ.
ಬ್ಲ್ಯಾಕ್‌ಸ್ಪಾಟ್ ಗುರುತಿಸಿ ವರದಿ ನೀಡುವಂತೆ ನಾಲ್ಕು ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ಸೂಚನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ನಾಲೆ ದುರಂತ ಮರುಕಳಿಸುತ್ತಿದ್ದ ಹಿನ್ನಲೆಯಲ್ಲಿ ತಡೆಗೋಡೆ ಇಲ್ಲದ ನಾಲೆ ಹಾಗೂ ಕೆರೆಗಳಿಂದ ಅಪಾಯಕಾರಿ ಸ್ಥಿತಿಗೆ ಕಾರಣವಾಗಿದೆ. ಆದ್ದರಿಂದ ನಾಲೆ, ಕೆರೆ ಬದಿ ತಡೆಗೋಡೆ/ಕ್ರಾಶ್ ಬಾರಿಯರ್ ನಿರ್ಮಿಸಲು ಸಮಿತಿ ರಚನೆ ಮಾಡಲಾಗಿದೆ ಎಂದಿದ್ದರು.
ಅದರಂತೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿ ನಾಲ್ಕು ವಿಭಾಗದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿತ್ತು. ಪ್ರತಿ ತಾಲೂಕಿಗೂ ನಾಲ್ವರು ಅಧಿಕಾರಿಗಳಿರುವ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಗೆ ಅತಿ ಅವಶ್ಯಕವಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದ್ದರು. ಆದರೆ ಸರ್ವೇಯಾಗಲಿ ಅಥವಾ ಅನಾಹುತ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮವಾಗಲಿ ಅನುಷ್ಠಾನಕ್ಕೆ ಬರಲೇ ಇಲ್ಲ ಎನ್ನುವುದು ವಾಸ್ತವ್ಯ ಸತ್ಯ. ದುರಂತ ನಡೆದ ಒಂದೆರೆಡು ದಿನ ಮಾತ್ರ ಚರ್ಚೆಗಷ್ಟೇ ಸೀಮಿತವಾಗಿ ಮತ್ತೆ ಮರೆತು ಹೋಗುವ ಖಯಾಲಿ ಇನ್ನೆಷ್ಟು ದಿನ ಮುಂದುವರೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಜಿಲ್ಲೆಯಲ್ಲಿ ನಡೆದಿರುವ ದುರಂತ

  • 1976 ಮಾ.5ರಲ್ಲಿ ಮಂಡ್ಯ ತಾಲೂಕಿನ ದುದ್ದ ಬಳಿ ಖಾಸಗಿ ಬಸ್ ದೊಡ್ಡ ಕಾಲುವೆಗೆ ಬಿದ್ದು ಬರೋಬ್ಬರಿ 105 ಜನರು ಮೃತಪಟ್ಟಿದ್ದರು. ಬೆಳಗ್ಗಿನ ಜಾವ ಕಿಕ್ಕಿರಿದು ಜನ ತುಂಬಿದ್ದ ಬಸ್ಸು 6.15ಕ್ಕೆ ದುದ್ದ ಸೇತುವೆ ಬಳಿ ಕಾಲುವೆಗೆ ಬಿತ್ತು. ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ಟಾಪ್‌ನಲ್ಲಿ ಕುಳಿತ್ತಿದ್ದವರನ್ನು ಹೊರತುಪಡಿಸಿ ಉಳಿದವರೆಲ್ಲ ಜಲಸಮಾಧಿಯಾಗಿದ್ದರು. ಚಾಲಕ ಕೆಂಪಣ್ಣ ಎಂಬವರು ಪಾರಾಗಿದ್ದರು.
  • 2018ರ ನ.24ರಂದು ಪಾಂಡವಪುರ ತಾಲೂಕು ಕನಗನಮರಡಿ ಸಮೀಪ ಖಾಸಗಿ ಬಸ್ ನಾಲೆಗೆ ಬಿದ್ದು 30 ಜನರು ಜಲಸಮಾಧಿಯಾಗಿದ್ದರು.
  • 2010ರ ಡಿ.4ರಂದು ಮೈಸೂರು ಹೊರವಲಯದ ಉಂಡಬತ್ತಿ ಕೆರೆಗೆ ವ್ಯಾನ್ ಬಿದ್ದು ಪಾಂಡವಪುರ ತಾಲೂಕಿನ ಅರಳಕುಪ್ಪೆ ಹಾಗೂ ಸುತ್ತಮುತ್ತಲಿನ 31 ಜನ ಅಸುನೀಗಿದ್ದರು. ನಂಜನಗೂಡು ಸಮೀಪ ಬೀಗರ ಔತಣಕೂಟಕ್ಕೆ ತೆರಳಿ ವಾಪಸ್ ಆಗುತ್ತಿದ್ದಾಗ ಈ ದುರಂತ ನಡೆದಿತ್ತು.
  • 1995ರಲ್ಲಿ ಮಳವಳ್ಳಿ ತಾಲೂಕು ಮಾರೇಹಳ್ಳಿ ಬಳಿ ಖಾಸಗಿ ಬಸ್ ಕೆರೆಗೆ ಬಿದ್ದು ಸುಮಾರು ಐದು ಜನರು ಮೃತಪಟ್ಟಿದ್ದರು.
  • 2011ರಲ್ಲಿ ಮಳವಳ್ಳಿ ತಾಲೂಕು ಕಲ್ಕುಣಿ ಸಮೀಪ ಖಾಸಗಿ ಬಸ್ ಕೆರೆಗೆ ಬಿದ್ದು ಸುಮಾರು ಮೂವರು ಸಾವನ್ನಪ್ಪಿದ್ದರು.
  • 2013ರ ಡಿ.29ರಂದು ಮಂಡ್ಯ ತಾಲೂಕು ಸಾತನೂರು ಬಳಿ ಬಸ್ ಕಾಲುವೆಗೆ ಉರುಳಿ ಐವರು ಗಾಯಗೊಂಡರೆ ಹಲವು ಜನರು ಶಾಶ್ವತ ಅಂಗವಿಕಲರಾಗಿದ್ದಾರೆ.
  • 2023 ಜು.29ರಂದು ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಸಮೀಪ ಕಾರು ವಿಶ್ವೇಶ್ವರಯ್ಯ ಉಪನಾಲೆಗೆ ಉರುಳಿ ನಾಲ್ವರು ಸಾವನ್ನಪ್ಪಿದರು.
  • 2023 ಜು.27ರಂದು ಮಂಡ್ಯ ತಾಲೂಕು ತಿಬ್ಬನಹಳ್ಳಿ ಗ್ರಾಮದ ಸಮೀಪ ಕಾರು ಪಲ್ಟಿ ಹೊಡೆದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದು ಚಾಲಕ ಮೃತಪಟ್ಟಿದ್ದನು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net