ಆಡು ತರಲು ಹೋದವನಿಗೆ ಬ್ಲ್ಯಾಕ್‌ಮೇಲ್

New Project (23)
Published on

ಉಪ್ಪಿನಂಗಡಿ: ಬಕ್ರೀದ್ ಹಬ್ಬಕ್ಕೆ ಆಡು ತರಲೆಂದು ರಾಜಸ್ಥಾನಕ್ಕೆ ಹೋದವರು ಅಲ್ಲಿನವರ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಸಂಪರ್ಕಕ್ಕೆ ಸಿಗದೆ ಮನೆಮಂದಿ ಕಂಗಾಲಾಗಿದ್ದಾರೆ.

34 ನೆಕ್ಕಿಲಾಡಿಯ ಮುಹಮ್ಮದ್ ಝಬೈರ್ ಆರೀಸ್ ಎಂಬುವರು ಸ್ನೇಹಿತನೊಂದಿಗೆ ಮುಂಬರುವ ಬಕ್ರೀದ್ ಹಬ್ಬಕ್ಕಾಗಿ ಆಡುಗಳನ್ನು ತರಲು ರಾಜಸ್ಥಾನಕ್ಕೆ ತೆರಳಿದ್ದರು. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರ ತಂದೆ ಇಬ್ರಾಹಿಂ, ಮೊದಲು ಲಾರಿ ಬಾಡಿಗೆ ಎರಡು ಲಕ್ಷ ರೂ.ನೀಡುವುದು, ಆಡು ಇಲ್ಲಿಗೆ ತಲುಪಿದ ಬಳಿಕ ಉಳಿದ ಹಣ ನೀಡುವುದು ಎಂದು ಅಲ್ಲಿಯವನೊಂದಿಗೆ ಇವರಿಗೆ ಒಪ್ಪಂದ ಆಗಿತ್ತು. ಆದರೆ ಅಲ್ಲಿ ಹೋದ ಬಳಿಕ ಆತ 10 ಲಕ್ಷ ರೂ. ಕೊಡದಿದ್ದರೆ ಆಡುಗಳನ್ನು ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದಾನೆ. ಅದಕ್ಕಾಗಿ 10 ಲಕ್ಷ ರೂ.ವನ್ನು ಅವನಿಗೆ ತಲುಪಿಸಲು ಮಗ ನಮಗೆ ಫೋನ್ ಮಾಡಿದ್ದ. ಅದರಂತೆ 10 ಲಕ್ಷ ರೂ.ವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. 10 ಲಕ್ಷ ರೂ. ತಲುಪಿದ ಕೂಡಲೇ ಆಡುಗಳನ್ನು ಲಾರಿಯಲ್ಲಿ ಲೋಡ್ ಮಾಡಲಾಗಿದೆ ಎಂದು ಮಗ ಫೋನ್ ಮಾಡಿ ತಿಳಿಸಿ, ಲಾರಿಯಲ್ಲಿ ಆಡುಗಳನ್ನು ಲೋಡ್ ಮಾಡಿದ ಫೋಟೋ ಕಳುಹಿಸಿದ್ದ. ಆದರೆ ಬಳಿಕ ಫೋನ್ ಮಾಡಿದ ಆತ ಇಲ್ಲಿ ಇನ್ನು 20 ಲಕ್ಷ ರೂ. ಅಕೌಂಟ್‌ಗೆ ಹಾಕಿಸಲು ಬೇಡಿಕೆ ಇಡುತ್ತಿದ್ದಾರೆ. ಮಧ್ಯಾಹ್ನದೊಳಗೆ ಹಣ ಕೊಡದಿದ್ದರೆ ಆಡು ಇಲ್ಲ. ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ಫೋನ್ ಮಾಡಿ ತಿಳಿಸಿದ್ದ ಎಂದು ವಿವರಿಸಿದ್ದಾರೆ.

ಬಳಿಕ ಆತನನ್ನು ಸಂಪರ್ಕ ಮಾಡಲು ಯತ್ನಿಸಿದಾಗ ಫೋನ್ ಸ್ವಿಚ್ಡ್‌ಆಫ್ ಆಗಿದೆ. ನನ್ನ ಪತ್ನಿ ಇಲ್ಲಿನ ಪೊಲೀಸ್ ಕಂಟ್ರೋಲ್ ರೂಂ ಸಂಪರ್ಕಿಸಿದಾಗ ಅವರು ಅಲ್ಲಿನ ಪೊಲೀಸ್ ಕಂಟ್ರೋಲ್ ರೂಂ ನಂಬರ್ ನೀಡಿದ್ದಾರೆ. ಅದಕ್ಕೆ ಫೋನ್ ಮಾಡಿ ವಿಚಾರ ತಿಳಿಸಿದಾಗ, ಅಲ್ಲಿನ ಪೊಲೀಸರು, ಲೊಕೇಶನ್ ಪತ್ತೆ ಮಾಡಿ ಅವರನ್ನೆಲ್ಲಾ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂಬ ಮಾಹಿತಿಯನ್ನು ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರಿಂದ ಸಿಕ್ಕಿದೆ. ಈ ಬೆಳವಣಿಗೆಯ ನಡುವೆ ಮಗ ಫೋನ್ ಸಂಪರ್ಕ ಸಿಕ್ಕಿಲ್ಲ. ಈಗ ಮತ್ತೆ ಆ ಪೊಲೀಸ್ ಅಧಿಕಾರಿಗೆ ಕರೆ ವಾಡಿದರೆ, ಆತ ಸರಿಯಾಗಿ ಉತ್ತರ ನೀಡದೆ ತಪ್ಪಿಸಿಕೊಳ್ಳಲು ಯತ್ನಿಸಿ, ಕರೆ ಕಡಿತ ಮಾಡುತ್ತಾನೆ. ಅಲ್ಲಿ ಇವರಿಗೆ ಏನಾಗಿದೆ? ಅಲ್ಲಿಯವರೊಂದಿಗೆ ಪೊಲೀಸರೂ ಶಾಮೀಲಾಗಿದ್ದಾರಾ? ಎಂಬುದು ತಿಳಿಯುತ್ತಿಲ್ಲ. ಒಟ್ಟಿನಲ್ಲಿ ನಮಗೇನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ತಿಳಿಸಿ, ಮಗನ ಪತ್ತೆಗಾಗಿ ಪುತ್ತೂರು ಶಾಸಕರ ಸಹಕಾರ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net