ಆಕ್ಸಿಜನ್ ಕಾನ್ಸಂಟ್ರೇಟರ್​ ಕಾಳದಂಧೆ ಆರೋಪಿ ನವನೀತ್ ಕಾಲ್ರಾಗೆ ಜಾಮೀನು

kalra1
Published on

ನವದೆಹಲಿ : ದೆಹಲಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್​ ಕಾಳದಂಧೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಸಿನೆಸ್​ಮನ್ ನವನೀತ್ ಕಾಲ್ರಾಗೆ ಜಾಮೀನು ಲಭಿಸಿದೆ. ದೆಹಲಿ ಚೀಫ್​ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್​ ಅರುಣ್ ಕುಮಾರ್ ಗಾರ್ಗ್​ ಅವರು 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್​ನ ಮೇಲೆ ಜಾಮೀನು ನೀಡುವ ಆದೇಶ ಹೊರಡಿಸಿದ್ದಾರೆ.

ದೆಹಲಿ ನಗರದಲ್ಲಿ ಹಲವು ರೆಸ್ಟೊರೆಂಟ್​ಗಳನ್ನು ನಡೆಸುವ ಕಾಲ್ರಾ, ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ಶೇಖರಿಸಿಟ್ಟು, ಅಗತ್ಯವಿರುವವರಿಗೆ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ಆರೋಪಿಸಲಾಗಿದೆ. ಮೇ ಮೊದಲ ವಾರದಲ್ಲಿ ದೆಹಲಿ ಪೊಲೀಸರು ನಡೆಸಿದ ದಾಳಿಗಳಲ್ಲಿ ಕಾಲ್ರಗೆ ಸೇರಿದ ಮೂರು ರೆಸ್ಟೊರೆಂಟ್​ಗಳಲ್ಲಿ ಒಟ್ಟು 524 ಕಾನ್ಸಂಟ್ರೇಟರ್​ಗಳನ್ನು ಜಪ್ತಿಪಡಿಸಿಕೊಳ್ಳಲಾಗಿತ್ತು.

ಈ ಪ್ರಕರಣದಲ್ಲಿ ಕಾಲ್ರರಿಂದ ಎಲ್ಲಾ ಸಂಬಂಧಿತ ದಾಖಲಾತಿಗಳನ್ನು ತನಿಖಾಧಿಕಾರಿಯು ಪಡೆದುಕೊಂಡಾಗಿರುವುದರಿಂದ, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯಾಧಾರಗಳನ್ನು ವ್ಯತ್ಯಾಸ ಮಾಡುವ ಪ್ರಮೇಯ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟ ಮ್ಯಾಜಿಸ್ಟ್ರೇಟರು ಜಾಮೀನು ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net