ಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ... ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!

blacmail
Published on

ಬೆಂಗಳೂರು: 8 ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ವಿವಾಹಿತ ಮಹಿಳೆಗೆ ಪರಿಚಯವಾಗಿದ್ದ 27 ವರ್ಷದ ಅವಿವಾಹಿತ ಸರ್ಕಾರಿ ನೌಕರನೇ ಈಗ ಆಕೆಯ ಬಾಳಿಗೆ ಕಂಟಕವಾಗಿದ್ದಾನೆ.

ಆರಂಭದಲ್ಲಿ ಪ್ರೀತಿ-ಪ್ರೇಮ ಎಂದೆಲ್ಲ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡ. ಬಳಿಕ ಒಂದಷ್ಟು ಹಣವನ್ನೂ ಪೀಕಿದ್ದು, ಈಗ ಆಕೆಯ ಗಂಡನ ಅಣ್ಣನಿಗೆ ತಾವಿದ್ದ ಖಾಸಗಿ ಕ್ಷಣದ ಫೋಟೋಗಳನ್ನು ಕಳಿಸಿದ್ದಾನೆ!   ಇದನ್ನೂ ಓದಿರಿ ಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…

ಕೆ.ಆರ್.ಪುರ ನಿವಾಸಿ 36 ವರ್ಷದ ಮಹಿಳೆಯ ಪತಿ ಅಂಗವಿಕಲ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಎರಡು ಬಾಡಿಗೆ ಮನೆಗಳಿಂದ ಬರುತ್ತಿದ್ದ ಆದಾಯದಲ್ಲಿ ಕುಟುಂಬದ ಜೀವನ ಸಾಗುತ್ತಿದೆ. ಈ ಮಹಿಳೆಗೆ ಫೇಸ್​ಬುಕ್​ನಲ್ಲಿ 27 ವರ್ಷದ ಅವಿವಾಹಿತ ಸರ್ಕಾರಿ ನೌಕರನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಲಾಕ್​ಡೌನ್​ ವೇಳೆ ಈ ಅಕ್ರಮ ಸಂಬಂಧದಲ್ಲಿ ಬಿರುಕು ಮೂಡಿದ್ದು, ಕಿಡಿಗೇಡಿ ಯುವಕ ಮಹಿಳೆಯ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ಅದೂ ಯಾವ ಕಾರಣಕ್ಕೆ ಗೊತ್ತಾ?

ವಯಸ್ಸಿನಲ್ಲಿ ತನಗಿಂತ 9 ವರ್ಷ ಹಿರಿಯಳ ಜತೆ ಲವ್ವಿ-ಡವ್ವಿ ಶುರು ಮಾಡಿಕೊಂಡಿದ್ದ ಯುವಕ ಆಕೆಯ ಬಳಿ ಹಲವು ನೆಪವೊಡ್ಡಿ ಆಗಾಗ ಹಣ ಪಡೆದಿದ್ದ. ಲಾಕ್​ಡೌನ್ ವೇಳೆ ಆಕೆಗೆ ಕರೆ ಮಾಡುತ್ತಿದ್ದ ಯುವಕ, ತಾನಿದ್ದಲ್ಲಿಗೆ ಬಂದು ಹಣ ನೀಡುವಂತೆ ಒತ್ತಾಯಿಸಿದ್ದ. ಕೊಡದಿದ್ದರೆ ನಿನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋವನ್ನು ಪತಿಯ ಸಂಬಂಧಿಕರ ಮೊಬೈಲ್​ಗೆ ಕಳುಹಿಸುವುದಾಗಿ ಬೆದರಿಸಿದ್ದ.

ಯುವಕನ ಬೆದರಿಕೆಗೆ ಪ್ರತಿಕ್ರಿಯಿಸದೆ ಮಹಿಳೆ ಸುಮ್ಮನಾಗಿದ್ದಳು. ಇದರಿಂದ ಆತ ಕುಪಿತಗೊಂಡಿದ್ದ. ಆಕೆ ತನ್ನೊಂದಿಗೆ ಇದ್ದ ಖಾಸಗಿ ದೃಶ್ಯವನ್ನು ಮಹಿಳೆಯ ಗಂಡನ ಅಣ್ಣನ ಮೊಬೈಲ್​ಗೆ ಕಳುಹಿಸಿದ್ದ. ಈ ವಿಚಾರ ಮಹಿಳೆಯ ಪತಿಗೆ ತಿಳಿದು ಪ್ರಕರಣ ‘ಪರಿಹಾರ’ ಕೌಟುಂಬಿಕ ಸಲಹಾ ಕೇಂದ್ರದ ಮೆಟ್ಟಿಲೇರಿತ್ತು. ಅಲ್ಲಿ ವಿಚಾರಣೆ ನಡೆಸಿದಾಗ, ಆತ ತಪ್ಪೊಪ್ಪಿಕೊಂಡಿದ್ದಾನೆ.

ಖಾಸಗಿ ದೃಶ್ಯ ಸೆರೆಹಿಡಿದು ಬ್ಲ್ಯಾಕ್​ಮೇಲ್​ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆಪ್ತ ಸಮಾಲೋಚಕಿ ಬಿ.ಎಸ್. ಸರಸ್ವತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net