

Black Box: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತವಾದ ಅಹಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅಪಘಾತಕ್ಕೀಡಾದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನದ ಕಪ್ಪು ಪೆಟ್ಟಿಗೆಯನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವಿಮಾನ ಅಪಘಾತವಾದ ವೈದ್ಯಕೀಯ ಹಾಸ್ಟೆಲ್ ಕಟ್ಟಡದ ಮೇಲ್ಛಾವಣಿಯಲ್ಲಿ ತನಿಖಾ ಬ್ಯೂರೋ (ಎಎಐಬಿ) ತಂಡವು ಈ ಸಾಧನವನ್ನು ವಶಪಡಿಸಿಕೊಂಡಿದೆ. ವಿಮಾನದ ಬಾಲದ ಬಳಿ ಇರುವ ಕಿತ್ತಳೆ ಬಣ್ಣದ ಸಾಧನವು ಕನಿಷ್ಠ 265 ಜೀವಗಳನ್ನು ಬಲಿ ಪಡೆದಿರುವ ಅಪಘಾತದ ತನಿಖೆಗೆ ಸಹಾಯ ಮಾಡುತ್ತದೆ.
ಇನ್ನು ಕಪ್ಪು ಪೆಟ್ಟಿಗೆ ಹುಡುಗಾಟಕ್ಕಾಗಿ ಗುಜರಾತ್ ಸರ್ಕಾರ 40ಕ್ಕೂ ಹೆಚ್ಚು ಅಧಿಕಾರಿಗಳ ತಂಡವನ್ನು ನೇಮಿಸಿತ್ತು. ಇದೀಗ ಬ್ಲಾಕ್ ಬಾಕ್ಸ್ ಪತ್ತೆಯಾದ ನಂತರ ಅಪಘಾತದ ಕುರಿತು ಹೆಚ್ಚಿನ ತನಿಖೆ ಆರಂಭವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ವಿಮಾನ ಅಪಘಾತದ ಆಳ ತನಿಖೆ ಮಾಡಲು ಈ ಬ್ಲಾಕ್ ಬಾಕ್ಸ್ ಸಹಾಯ ಮಾಡುತ್ತದೆ. ಈ ಸಾಧನವು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಅನ್ನು ಹೊಂದಿರುತ್ತದೆ. ಮೊದಲನೆಯದು ವಿಮಾನಕ್ಕೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಡೇಟಾವನ್ನು ದಾಖಲಿಸಿದರೆ, ಎರಡನೆಯದು ಇಬ್ಬರು ಪೈಲಟ್‌ಗಳ ನಡುವಿನ ಕಾಕ್‌ಪಿಟ್ ಸಂಭಾಷಣೆಯನ್ನು ಕೊನೆಯ ಕ್ಷಣದವರೆಗೆ ದಾಖಲಿಸುತ್ತದೆ.(ಏಜೆನ್ಸೀಸ್)