ಲೈಂಗಿಕ ಕಾರ್ಯಕರ್ತೆಯರಿಗೆ ನೋವಾಗಿದ್ದರೆ ಕ್ಷಮೆ ಕೋರುವೆ: ಬಿ.ಕೆ.ಹರಿಪ್ರಸಾದ್​

BK Hariprasad
Published on

ಬಾಗಲಕೋಟೆ: ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ವಿಶೇಷ ಗೌರವ ಇದೆ. ನನ್ನ ಹೇಳಿಕೆಯನ್ನ ಕೆಲವರು ತಿರುಚಿ ಹೇಳಿದ್ದಾರೆ. ಅನಗತ್ಯ ವಿವಾದ ಸೃಷ್ಠಿಗೆ ಯತ್ನಿಸುತ್ತಿದ್ದಾರೆ. ನನ್ನ ಮಾತಿಮದ ಲೈಂಗಿಕ ಕಾರ್ಯಕರ್ತೆಯರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್​ ಹೇಳಿದರು.

ಬಾಗಲಕೋಟೆಯಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಹರಿಪ್ರಸಾದ್​, ಹೊಸಪೇಟೆಯಲ್ಲಿ ನಿನ್ನೆ ಬಿಜೆಪಿ ಶಾಸಕರ ಬಗ್ಗೆ ನಾನು ಮಾತನಾಡಿದ್ದನ್ನ ಕೆಲವರು ತಿರುಚಿ ಹೇಳುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತೆಯರು, ಅವರ ಕೆಲಸದ ಬಗ್ಗೆ ಅಪಾರವಾದ ಗೌರವವಿದೆ. ಅವರ ಮನಸ್ಸಿಗೆ ನೋವಾಗಿದ್ರೆ ನಾನು ಕ್ಷಮೆ ಕೋರುತ್ತೇನೆ ಎಂದರು.

ತಮ್ಮನ್ನ ತಾವೇ ಮಾರಿಕೊಂಡಿರುವ ನಾಯಕ 'ಒಬ್ಬ ಪ್ರೊಡ್ಯೂಸರ್' ರೀತಿ ಹೇಳ್ತಿದ್ದಾರೆ. ಗರತಿಯರ ತರಹ ಹೇಳಿಕೆ ನೀಡ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಬಿ.ಸಿ.ಪಾಟೀಲ್​ಗೆ ಟಾಂಗ್​ ನೀಡಿದರು. ನಾನು ರಾಜಮಾರ್ಗದಿಂದ ಬಂದವನು. ಹಿಂಬದಿಯಿಂದ ಬಂದಿಲ್ಲ. ಇವರ ಹಾಗೇ ಸಿಕ್ರೇಟ್ ಬಾಗಿಲಲ್ಲಿ ಬಂದಿಲ್ಲ. ಇವರು ಮಂತ್ರಿಯಾಗಲು ಏನೇನ್ ಮಾಡಿದ್ದಾರೆ ಅಂತ ಹೇಳಿ ನನ್ನ ಬಾಯಿಯನ್ನ ಹೊಲಸು ಮಾಡಿಕೊಳ್ಳಲ್ಲ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಸ್ಕ್ರಾಪ್ ರವಿ, ಫೂಟರ್ ರವಿ, ಸಿಟಿ ರವಿ ಹೀಗೆ ರವಿಗಳು ಬಹಳಷ್ಟು ಜನ ಇದ್ದಾರೆ. ನಾನು ಪಕ್ಷ ಬದಲಾವಣೆಯಲ್ಲಿ, ಇವರಂತೆ ಗೋಸುಂಬೆ ರೀತಿಯ ಬದಲಾವಣೆ ಮಾಡಲ್ಲ. ಮುನಿರತ್ನ ಏನು ಅಂತ ನನಗೆ ಚೆನ್ನಾಗಿ ಗೊತ್ತು ಎಂದರು.

'ಪಿಂಪ್' ಎಂದು ಬಿಜೆಪಿಯ ಶಾಸಕ ಯತ್ನಾಳ್ ಹೇಳಿದ್ದಾರೆ. ಸಿಎಂಗೆ ಧಮ್ ಇದ್ರೆ ಅವರ ಹೇಳಿಕೆ ಬಗ್ಗೆ ತನಿಖೆ ಮಾಡಲಿ. ಬಿಜೆಪಿಯವರಿಗೆ ಗಂಡಸ್ತನ ಇದ್ರೆ ಎರಡು ವರ್ಷದಿಂದ ಮಾತನಾಡ್ತಿರೋ ಯತ್ನಾಳ್​ ವಿರುದ್ಧ ಕ್ರಮ ತೆಗೆದುಕೊಳ್ತಾರಾ? ಎಂದು ಹರಿಪ್ರಸಾದ್​ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net