ಖಾತೆ ನಿಭಾಯಿಸಲಾಗದ ಅಸಮರ್ಥ ಸಚಿವ ಪ್ರಿಯಾಂಕ್​

Sunil New
Published on

ಬಿಜೆಪಿಯ ವಿ.ಸುನೀಲಕುಮಾರ್​ ಆರೋಪ

ಆರ್​ಎಸ್​ಎಸ್​ ವಿರುದ್ಧದ ಪತ್ರಕ್ಕೆ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಉಡುಪಿ

ಎರಡೂವರೆ ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕೋಮಾ ಸ್ಥಿತಿಯಲ್ಲಿದ್ದು, ಆ ಖಾತೆಯನ್ನು ಸರಿಯಾಗಿ ನಿಭಾಯಿಸಲಾಗದ ಪ್ರಿಯಾಂಕ್​ ಖರ್ಗೆ ಅಸಮರ್ಥ ಸಚಿವ. ಆದರೂ ತಾನೊಬ್ಬ ಸಚಿವ ಎಂದು ತೋರ್ಪಡಿಸಲು ಇಲ್ಲಸಲ್ಲದ ವಿಷಯ, ವಿಚಾರಗಳನ್ನು ಪದೇಪದೆ ಮಾಧ್ಯಮದ ಮುಂದೆ ಪ್ರಸ್ತಾಪಿಸುವುದು ಅವರಿಗೆ ಚಟವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲಕುಮಾರ್​ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ (ಅ.13) ಮಾಧ್ಯಮದವರೊಂದಿಗೆ ಮಾತನಾಡಿ, ಆರ್​ಎಸ್​ಎಸ್​ ವಿರುದ್ಧ ಕ್ರಮಕೈಗೊಳ್ಳುವಂತೆ ಸಚಿವ ಪ್ರಿಯಾಂಕ್​ ಖರ್ಗೆ ಸಿಎಂಗೆ ಪತ್ರ ಬರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.

ಆರ್​ಎಸ್​ಎಸ್​ ಟೀಕಿಸುವ ದಾಷ್ಟ್ಯ೯

ರಾಜ್ಯದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರು, ಪ್ರಯಾಣಿಕರು ಸಾವನ್ನಪ್ಪುತ್ತಿದ್ದಾರೆ. ಅವರ ಆಡಳಿತದಲ್ಲಿ ಒಂದು ಕಿಲೋ ಮೀಟರ್​ ಹೊಸ ರಸ್ತೆ ನಿರ್ಮಿಸಲೂ ಆಗಿಲ್ಲ. ಗ್ರಾಪಂಗೆ ಅನುದಾನ ಇಲ್ಲ, ಹೊಸ ಪಿಡಿಒ ನೇಮಕಾತಿಯನ್ನೂ ಮಾಡಿಲ್ಲ. ಒಂದಿಷ್ಟೂ ಅನುಭವ ಇಲ್ಲದ ಅವರು ಆರ್​ಎಸ್​ಎಸ್​ನಂತಹ ಸಂಘಟನೆಯನ್ನು ಟೀಕಿಸುವ ದಾಷ್ಟ್ಯ೯ ತೋರಿದ್ದಾರೆ. ಶತಮಾನದ ಸಂಭ್ರಮದಲ್ಲಿರುವ ಆರ್​ಎಸ್​ಎಸ್​ಅನ್ನು ಟೀಕಿಸಿದರೆ ಪ್ರಚಾರಗಿಟ್ಟಿಸಬಹುದು ಎನ್ನುವುದು ಅವರ ಉದ್ದೇಶ ಎಂದರು.

ಘಟಾನುಟಿಗಳಿಗೇ ಹೆದರಿಲ್ಲ

ಆರ್​ಎಸ್​ಎಸ್​ ಎಂದರೆ ಸೇವೆ, ದೇಶಭಕ್ತಿ. ಅದೊಂದು -ಶಿಸ್ತು. ಈ ಹಿಂದೆ ಪ್ರಧಾನಿ -ನೆಹರು ಮುಂದೆ ಮಂಡಿಯೂರಿಲ್ಲ. ಪ್ರಧಾನಿ ಇಂದಿರಾ ಗಾಂಧಿಗೂ ಹೆದರಿಲ್ಲ. ಅವರಪ್ಪ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರಾದಾಗಲೂ ಏನೂ ಮಾಡಲು ಸಾಧ್ಯವಾಗಿಲ್ಲ. ಘಟಾನುಟಿಗಳಿಗೇ ಹೆದರಿಲ್ಲ. ಇನ್ನು ಪ್ರಿಯಾಂಕ್​ನಂತಹ ಬೇಜವಾಬ್ದಾರಿ ಸಚಿವನಿಂದ ಆರ್​ಎಸ್​ಎಸ್​ ಶಕ್ತಿಯನ್ನು ತಡೆಯಲು ಸಾಧ್ಯವೇ ಎಂದು ಸುನೀಲಕುಮಾರ್​ ಪ್ರಶ್ನಿಸಿದರು.

ನವೆಂಬರ್​ ಕ್ರಾಂತಿ ಜನರಿಗೆ ಒಳ್ಳೆಯದಾಗಲಿ

ಡಿ.ಕೆ. ಶಿವಕುಮಾರ್​ ಸಿಎಂ ವದಂತಿಗೆ ಪ್ರತಿಕ್ರಿಯಿಸಿದ ಸುನೀಲಕುಮಾರ್​, ಮುಖ್ಯಮಂತ್ರಿ ಆಗಲು ಶಾಸಕರ ಸಂಖ್ಯೆ ಮಾತ್ರವಲ್ಲ, ಹೈಕಮಾಂಡ್​ ಬಲವೂ ಬೇಕು. ನವೆಂಬರ್​ ಕ್ರಾಂತಿ ಯಾರಿಗೆ ಒಳ್ಳೆಯದಾಗುತ್ತೋ ಗೊತ್ತಿಲ್ಲ. ಆದರೆ, ಆ ಕ್ರಾಂತಿ ಜನರಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ. ಹತ್ತಾರು ಪಂಗಡಗಳಾಗಿ ಕಾಂಗ್ರೆಸ್​ ಒಡೆದು ಹೋಗಿದೆ. ಪರಮೇಶ್ವರ ಅವರೂ ಸಿಎಂ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅಧಿಕಾರ ಬಿಡುತ್ತಾರೋ ಅಥವಾ ಹೈಕಮಾಂಡ್​ ಮಾತು ತಿರಸ್ಕರಿಸುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ರಾಜ್ಯದ ಜನರು ನವೆಂಬರ್​ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ನನಗಂತೂ ಡಿಕೆಶಿ ಅವರ ಬಗ್ಗೆ ಅನುಕಂಪ ಬರಲು ಪ್ರಾರಂಭವಾಗಿದೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net