'ಸಬ್ಕಾ ಸಾಥ್, ಸಬ್ಕಾ ವಿಕಾಸ್ ' ಘೋಷಣೆ ಅನಗತ್ಯ: ಬಿಜೆಪಿ ನಾಯಕ ಸುವೇಂದು ಅಧಿಕಾರಿ

adihkari
Published on

ಕೋಲ್ಕತ್ತಾ: ಅಲ್ಪಸಂಖ್ಯಾತ ಸಮುದಾಯದ ಬೆಂಬಲದ ಕೊರತೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದ್ದರ ಬಗ್ಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಸುವೇಂದು ಅಧಿಕಾರಿ 'ಸಬ್ಕಾ ಸಾಥ್, ಸಬ್ಕಾ ವಿಕಾಸ್ ' ಎನ್ನುವುದು ಅನಗತ್ಯ. ಬದಲಿಗೆ ನಮ್ಮೊಂದಿಗೆ ಯಾರು ಇರುತ್ತಾರೋ ಅವರೊಂದಿಗೆ ನಾವು ಇರುತ್ತೇವೆ (ಹಮ್ ಉಂಕೆ ಸಾಥ್ ಜೋ ಹುಮಾರೇ ಸಾಥ್) ಎಂದು ಹೇಳಿದರು.

ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ಎಂದು ನಮ್ಮ ನಾಯಕರು ಹೇಳುತ್ತಾರೆ. ಆದರೆ ನಾನು ಇನ್ಮುಂದೆ ಇದನ್ನ ಹೇಳಲ್ಲ. ಬದಲಿಗೆ ʻಜೋ ಹಮಾರೆ ಸಾಥ್, ಹಮ್ ಉಂಕೆ ಸಾಥ್ʼ ಎಂದು ಹೇಳುತ್ತೇವೆ. ʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ಮತ್ತು ಅಲ್ಪಸಂಖ್ಯಾತ ಮೋರ್ಚಾ ಅಗತ್ಯವಿಲ್ಲ, ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ‌.

ಪಶ್ಚಿಮ ಬಂಗಾಳದ ಮತದಾರರಲ್ಲಿ ಶೇ.30 ರಷ್ಟು ಜನ ಅಲ್ಪಸಂಖ್ಯಾತರಿದ್ದಾರೆ. ಲೋಕಸಭೆ ಚುನಾವಣೆ ಸಮಯದಲ್ಲಿ ಹಲವು ಪ್ರದೇಶಗಳಲ್ಲಿ ಟಿಎಂಸಿಯ ಜಿಹಾದಿ ಗೂಂಡಾಗಳು ಹಿಂದೂಗಳಿಗೆ ಮತದಾನ ಮಾಡಲು ಅವಕಾಶ ನೀಡಲಿಲ್ಲ ಎಂದು ಸುವೇಂದು ಅಧಿಕಾರಿ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಪಾದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ. ಅದಕ್ಕೆ "ಟಿಎಂಸಿಯ ಜಿಹಾದಿ ಗೂಂಡಾಗಳು ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಡಿಸ್ಟ್ರಿಬ್ಯೂಟೆಡ್ ಏರಿಯಾಸ್​ ಆ್ಯಕ್ಟ್​ ಜಾರಿ ಮಾಡಿದರೆ ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯ. ಹಿಂಬಾಗಿಲು ಮೂಲಕ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಮಗೆ ಇಷ್ಟವಿಲ್ಲ ಎಂದರು.

"ಜನರ ಆದೇಶದೊಂದಿಗೆ ನಾವು ಚುನಾವಣೆಯಲ್ಲಿ ಗೆದ್ದಾಗ ನಾವು ಅಧಿಕಾರಕ್ಕೆ ಬರುತ್ತೇವೆ. ಆದರೆ ಅದಕ್ಕಾಗಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಸುವೇಂದು ಹೇಳಿದರು.

ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಗುರಿಗೆ ಅಲ್ಪಸಂಖ್ಯಾತ ಸಮುದಾಯವು ಪ್ರಮುಖ ಅಡ್ಡಿಯಾಗಿ ಹೊರಹೊಮ್ಮಿದೆ ಎಂದು ಮತದಾನದ ವಿಶ್ಲೇಷಣೆ ಬೆನ್ನಲ್ಲೇ ಸುವೇಂದು ಅವರಿಂದ ಈ ಹೇಳಿಕೆ ಬಂದಿದೆ. ಹಿಂದಿನ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ 12 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net