ಉತ್ತರ ಪ್ರದೇಶದಂತೆ ರಾಜಸ್ಥಾನದಲ್ಲೂ ಮತ್ತೊಬ್ಬ ಯೋಗಿ ಉದಯವಾಗ್ತಾರಾ? ಯಾರು ಈ ಬಾಬಾ ಬಾಲಕನಾಥ್​?

Baba Balaknath
Published on

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ಮುಂದಿನ ಸಿಎಂ ಯಾರು ಎಂಬ ಚರ್ಚೆ ಬಹಳ ಜೋರಾಗಿದೆ. ಇದರ ನಡುವೆ ಉತ್ತರ ಪ್ರದೇಶದಂತೆ ರಾಜಸ್ಥಾನದಲ್ಲೂ ಮತ್ತೊಬ್ಬ ಯೋಗಿ ಉದಯವಾಗಬಹುದು ಎಂದು ಹೇಳಲಾಗುತ್ತಿದೆ.

ಧಾರ್ಮಿಕ ನಾಯಕ ಹಾಗೂ ಅಲ್ವಾರ್​ ಸಂಸದ ಬಾಬಾ ಬಾಲಕನಾಥ್​​ ಅವರನ್ನು ರಾಜಸ್ಥಾನದ ಯೋಗಿ ಎಂದೇ ಕರೆಯಲಾಗಿದೆ. ಇವರು ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಲಾಗಿದೆ. ಬಾಲಕನಾಥ್​​ ಅವರು ತಿಜರಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಸ್ಪರ್ಧಿ ಇಮ್ರಾನ್​ ಖಾನ್​ ವಿರುದ್ಧ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವಿನ ದಡ ತಲುಪಿದ್ದಾರೆ.

ಇದೇ ಸಂದರ್ಭದಲ್ಲಿ ರಾಜಸ್ಥಾನದ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕನಾಥ್​​, ನಮ್ಮ ಪ್ರಧಾನಿ ಬಿಜೆಪಿಯ ಮುಖವಾಗಿದ್ದು, ಅವರ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆಯೂ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ. ಸಂಸದನಾಗಿ ನಾನು ಸಂತೋಷವಾಗಿದ್ದೇನೆ. ಸಮಾಜ ಸೇವೆ ಮಾಡಲು ಬಯಸುತ್ತೇನೆ ಮತ್ತು ಇದರಲ್ಲೇ ನನಗೆ ತೃಪ್ತಿ ಇದೆ ಎಂದರು.

ಇದುವರೆಗೂ ರಾಜಸ್ಥಾನ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಆಡಳಿತದಲ್ಲಿತ್ತು. ಇದೀಗ ಚುನಾವಣೆಯಲ್ಲಿ ಹೀನಾಯ ಸೋಲಿನ ಮುಖಭಂಗ ಅನುಭವಿಸಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಆದರೆ, ಇದುವರೆಗೂ ರಾಜಸ್ಥಾನದ ಸಿಎಂ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದು ನಿಗೂಢವಾಗಿಯೇ ಉಳಿದಿದೆ. ಒಂದು ವೇಳೆ ಬಾಲಕನಾಥ್​ ಮುಖ್ಯಮಂತ್ರಿಯಾದರೆ, ಯೋಗಿ ಆದಿತ್ಯನಾಥ್ ನಂತರ ಉನ್ನತ ಹುದ್ದೆ ಅಲಂಕರಿಸಿದ ಮತ್ತೊಬ್ಬ 'ಯೋಗಿ' ಎನಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿತರ ಸಂಖ್ಯೆ ದೊಡ್ಡದಾಗಿದೆ. ವಸುಂಧಾರಾ ರಾಜೆ ಹೊರತುಪಡಿಸಿ, ಕೇಂದ್ರ ಸಚಿವ ಗಜೇಂಧ್ರ ಶೇಖಾವತ್​, ಸತೀಶ್​ ಪೂನಿಯಾ, ರಾಜ್ಯ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ, ವಸುಂಧರಾ ರಾಜೆ ಸೋದರ ಸಂಬಂಧಿ ದಿಯಾ ಕುಮಾರಿ ಹಾಗೂ ಬಾಬಾ ಬಾಲಕನಾಥ್​ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಸಿಪಿ ಜೋಶಿ ಮತ್ತು ಸತೀಶ್ ಪೂನಿಯಾ ಇಬ್ಬರೂ ಚುನಾವಣಾ ಯುದ್ಧದಲ್ಲಿ ಸೋತಿದ್ದು, ಸಿಎಂ ಸ್ಥಾನದ ಆಸೆಯನ್ನು ಕೈಬಿಡಬೇಕಾಗಿದೆ.

5.30ರ ಮತಎಣಿಕೆಯ ಟ್ರೆಂಡ್​ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್​ 70, ಬಿಎಸ್​ಪಿ 2 ಮತ್ತು ಪಕ್ಷೇತರರು 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸರ್ಕಾರ ರಚನೆಗೆ 100 ಸ್ಥಾನಗಳ ಮ್ಯಾಜಿಕ್​ ನಂಬರ್​ ತಲುಪಬೇಕಿದ್ದು, 115 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ, ಅಧಿಕಾರ ರಚಿಸುವುದು ಖಚಿತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net