ಇಷ್ಟು ದಿನ ಎಲ್ಲಿಗೆ ಹೋಗಿದ್ರಿ; ಬಿಜೆಪಿ ಸಂಸದರಿಗೆ ಸ್ವಪಕ್ಷದ ಕಾರ್ಯಕರ್ತರಿಂದ ತರಾಟೆ

umesh jadhav
Published on

ಕಲಬುರಗಿ: ಕಲಬುರಗಿ ಲೋಕಸಭೆ ಕ್ಷೇತ್ರದ ಸಂಸದ ಡಾ. ಉಮೇಶ್​ ಜಾಧವ್​ ಅವರನ್ನು ಸ್ವಪಕ್ಷದ ಕಾರ್ಯಕರ್ತರೆ ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ. ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಪ್ರಬುದ್ಧರ ಸಭೆಯಲ್ಲಿ ಘಟನೆ ನಡೆದಿದೆ.

ಸಭೆಯನ್ನುದ್ದೇಶಿಸಿ ಉಮೇಶ್​ ಜಾಧವ್​ ಮಾತನಾಡುವ ವೇಳೆ ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್​ ಸದಸ್ಯ ರವಿಕುಮಾರ್​ ಅವರ ಕೊಡುಗೆ ಸಾಕಷ್ಟಿದೆ. ಹಗಲು ರಾತ್ರಿ ಎನ್ನದೇ ನನ್ನ ಪರವಾಗಿ ಅವರು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದರು.

ಜಾಧವ್​ ಪರಿಷತ್​ ಸದಸ್ಯ ರವಿಕುಮಾರ್​ರನ್ನು ಹಾಡಿ ಹೊಗಳುತ್ತಿದ್ದಂತೆ ಕೆರಳಿದ ಕಾರ್ಯಕರ್ತರು ನಾವ್ಯಾರು ನಿಮಗೆ ಮತ ಹಾಕಿಲ್ಲವೆ , ಒಬ್ಬರ ಓಲೈಕೆ ಬದಿಗಿಡಿ. ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಣಿಸಿಕೊಳ್ಳದವರು ಈಗ ಯಾಕೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

bjp fight

ಈ ವೇಳೆ ಮಧ್ಯಪ್ರವೇಶಿಸಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್‌ ರದ್ದೆವಾಡಗಿ ಹಾಗೂ ಕಲಬುರಗಿ ಮೇಯರ್​ ವಿಶಾಲ್​ ದರ್ಗಿ ಮಧ್ಯಪ್ರವೇಶಿಸಿ ಸಂಸದರ ಭಾಷಣದ ನಡುವೆ ಈ ರೀತಿ ವರ್ತಿಸಬಾರದು. ಬಿಜೆಪಿ ಶಿಸ್ತಿನ ಪಕ್ಷ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಏನೇ ಅಸಮಾಧಾನ ಇದ್ದರು ಪಕ್ಷದ ಒಳಗೆ ಅದನ್ನು ಬಗೆ ಹರಿಸಿಕೊಳ್ಳೋಣ ಎಮದು ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.

ವಿಧಾನಪರಿಷತ್​ ಸದಸ್ಯ ಎನ್​.ರವಿಕುಮಾರ್​ ಮಾತನಾಡಿ ಸಂಸದ ಉಮೇಶ್‌ ಜಾಧವ್‌ ಅವರು ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದಾರೆ. ಅವರ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಮಾತು ಮುಮದುವರೆಸಿದ ಜಾಧವ್​ ನಾನು ಕಾರ್ಯಕರ್ತರಿಂದ ಗೆದ್ದಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಲು ಸಿದ್ಧ ಇದ್ದೇನೆ. ಎರಡು ಗಂಟೆ ಇಲ್ಲಿಯೇ ಕುಳಿತು ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net