

ಕೋಲ್ಕತ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಆಡಳಿತಾರೂಢ ಟಿಎಂಸಿಯ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ ಆಡಿಯೋ ತುಣುಕು ಈಗ ರಾಜಕೀಯ ಸಂಚಲನ ಮೂಡಿಸಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪ್ರಶಾಂತ್ ಮತ್ತು ಇತರೆ ಕೆಲವು ಪತ್ರಕರ್ತರ ನಡುವಿನ ಮಾತುಕತೆಯ ಆಡಿಯೋದ ನಾಲ್ಕು ತುಣುಕುಗಳನ್ನು ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಸರ್ಕಾರದ ವಿರುದ್ಧ ತೀವ್ರವಾದ ಆಡಳಿತ ವಿರೋಧಿ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿದೆ. ಬಿಜೆಪಿಗೆ ಗೆಲುವು ಸಿಗಬಹುದು ಎಂದು ಹೇಳಿದ್ದು ಆಡಿಯೋದಲ್ಲಿ ದಾಖಲಾಗಿದೆ. ಚಾಟ್ ರೂಮ್ ಸೌಲಭ್ಯ ಬಳಸಿಕೊಂಡು ರೂಪಿಸಿರುವ ಕ್ಲಬ್ ಹೌಸ್ ಎಂಬ ಸಾರ್ವಜನಿಕ ಚಾಟಿಂಗ್ನಲ್ಲಿ ಪ್ರಶಾಂತ್ ಕಿಶೋರ್ ಈ ಮಾತುಗಳನ್ನು ಹೇಳಿದ್ದಾರೆ.
ಟ್ವೀಟ್ನಲ್ಲಿ ಇರುವುದೇನು?: ‘ಟಿಎಂಸಿಯ ಆಂತರಿಕ ಸಮೀಕ್ಷೆಯ ಪ್ರಕಾರವೇ ಬಿಜೆಪಿ ಗೆಲುವು ದಾಖಲಿಸಲಿದೆ. ಮೋದಿಗಾಗಿ ಜನತೆ ಮತ ಚಲಾಯಿಸುತ್ತಾರೆ. ಮತ ಧ್ರುವೀಕರಣ ಆಗಿರುವುದು ವಾಸ್ತವ. ಪರಿಶಿಷ್ಟ ಜಾತಿಯವರು (ಶೇ. 27) ಮತ್ತು ಮಾತುವಾ ಸಮುದಾಯದವರು ಬಿಜೆಪಿಗೆ ಮತ ಚಲಾಯಿಸುತ್ತಾರೆ. ಬಿಜೆಪಿಯ ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಯಾವಾಗ ಮಾತುಕತೆ ರೆಕಾರ್ಡ್ ಆಗುತ್ತಿದೆ ಎಂಬುದು ಅರಿವಾಯಿತೋ ಮಾತುಕತೆ ನಿಂತು ಹೋಗಿದೆ ಎಂದು ಅಮಿತ್ ಮಾಳವೀಯ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಶಾಂತ್ ಕಿಶೋರ್ ಹೇಳಿದ್ದೇನು?: ‘ಪಶ್ಚಿಮ ಬಂಗಾಳದಲ್ಲಿ ಕಳೆದ 20 ವರ್ಷಗಳಲ್ಲಿ ಮುಸ್ಲಿಂ ತುಷ್ಟೀಕರಣ ನಡೆದಿತ್ತು. ಹಾಗೆ ಮಾಡಿದವರು ಅಧಿಕಾರಕ್ಕೂ ಬರುತ್ತಿದ್ದರು. ಈಗ ಕಾಲ ಬದಲಾಗಿದೆ. ಹಿಂದುಗಳಿಗೂ ತಮ್ಮನ್ನೂ ಕೇಳುವವರಿದ್ದಾರೆ ಎಂದು ಅನಿಸತೊಡಗಿದೆ ಸಹಜವಾಗಿಯೇ ಎಲ್ಲರ ಒಲವೂ ಬಿಜೆಪಿ ಕಡೆಗೆ ತಿರುಗಿದೆ. ಮಮತಾ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ. ಇದು ಬಿಜೆಪಿ ವಿರುದ್ಧ ಇಲ್ಲ. ಇಲ್ಲಿ ಮೋದಿ ಜನಪ್ರಿಯತೆ ಬಹುವಾಗಿ ಇದೆ. ಮಮತಾರ ಜನಪ್ರಿಯತೆಯೂ ಇದೆ’ ಎಂದು ಪ್ರಶಾಂತ್ ಕಿಶೋರ್ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.
ಕೋಟ್
'ಬಿಜೆಪಿ 100ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ಗೆದ್ದರೆ ರಾಜಕೀಯ ಬಿಡುತ್ತೇನೆ ಎಂದು ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಅಮಿತ್ ಮಾಳವೀಯ ಬಿಜೆಪಿಗೆ ಅನುಕೂಲವಾಗುವಂತಹ ಅಂಶಗಳಿರುವ ಆಡಿಯೋ ತುಣುಕುಗಳನ್ನಷ್ಟೇ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.ಅವರಿಗೆ ತಾಕತ್ತಿದ್ದರೆ ಪೂರ್ಣ ಆಡಿಯೋ ಟ್ವೀಟ್ ಮಾಡಲಿ'
-ಪ್ರಶಾಂತ್ ಕಿಶೋರ್ ಟಿಎಂಸಿ ಚುನಾವಣಾ ಸಲಹೆಗಾರ.