ಜೂ.9ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ನೇತ್ರತ್ವದ ನಿಯೋಗ ದ.ಕ.ಜಿಲ್ಲೆಗೆ ಭೇಟಿ

bjp
Published on



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣ, ಪೊಲೀಸರಿಂದ ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ಬೆದರಿಕೆ ಸಹಿತ ವಿವಿಧ ಘಟನೆಗಳ ಬಗ್ಗೆ ಪರಿಶೀಲನೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ನಿಯೋಗ ಜೂ.9ರಂದು ದ.ಕ.ಜಿಲ್ಲೆಗೆ ಭೇಟಿ ನೀಡಲಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ವಿ.ಸುನೀಲ್ ಕುಮಾರ್, ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್, ಸಿ.ಟಿ.ರವಿ ನಿಯೋಗದ ಇತರ ಸದಸ್ಯರಾಗಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಇದೆ. ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಇಬ್ಬಗೆ ನೀತಿ ತೋರುತ್ತಿದ್ದು , ಮುಸ್ಲಿಂ ಮುಖಂಡರ ರಾಜೀನಾಮೆ ನಾಟಕಕ್ಕೆ ಬೆದರಿ ಅನಗತ್ಯವಾಗಿ ಹಿಂದು ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಲಾಗುತ್ತಿದೆ.
ರಾತ್ತಿ ಹೊತ್ತಲ್ಲಿ ಪೊಲೀಸರು ಮನೆಗೆ ನುಗ್ಗಿ ತನಿಖೆ ನೆಪದಲ್ಲಿ ಹಿಂದು ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಮನೆಗೆ ಪ್ರವೇಶಿಸಿ ಫೋಟೊ ತೆಗೆಸುವ ಮೂಲಕ ಮಾನಸಿಕ ಹಿಂಸೆ ನೀಡುವ ಘಟನೆಗಳು
ವ್ಯಾಪಕವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಪ್ರತಿಪಕ್ಷ ಮತ್ತು ಹಿಂದು ಸಂಘಟನೆಯನ್ನು ಬಲಹೀನಗೊಳಿಸಲು ಷಡ್ಯಂತ್ರ ನಡೆಸಿದೆ.
ರಾಜ್ಯದಲ್ಲಿ ಗೃಹಸಚಿವರು ಇದ್ದಾರೆ ಎನ್ನುವುದನ್ನು ನಂಬಲಾಗದ ಸ್ಥಿತಿ ಇದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಾಗೂ ಏಕಪಕ್ಷೀಯವಾಗಿ ನಡೆಸುತ್ತಿರುವ ಬಲವಂತದ ಕ್ರಮಗಳ ಬಗ್ಗೆ ಸಂಸದರು, ಶಾಸಕರು ಹಾಗೂ ಸಾರ್ವಜನಿಕರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ನೇತ್ರತ್ವದ ನಿಯೋಗ ಮಾಹಿತಿ ಪಡೆಯಲಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net