

ಅಗರ್ತಲ: ತ್ರಿಪುರಾದ ರಾಜಧಾನಿ ಅಗರ್ತಲ ನಗರಪಾಲಿಕೆ ಜತೆ ರಾಜ್ಯದ ಇತರ 13 ನಗರಪಾಲಿಕೆಗಳು ಮತ್ತು ನಗರ ಪಂಚಾಯತ್ಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾರೀ ವಿಜಯ ಸಾಧಿಸಿದೆ. ಕೇವಲ ಒಂದು ಸೀಟನ್ನು ಮಾತ್ರ ಗೆದ್ದಿರುವ ತೃಣಮೂಲ ಕಾಂಗ್ರೆಸ್ಗೆ ಭಾರೀ ನಿರಾಸೆ ಉಂಟಾಗಿದೆ.
ಇಂದು ರಾಜ್ಯದ 8 ಜಿಲ್ಲೆಗಳ 13 ಕೇಂದ್ರಗಳಲ್ಲಿ ಮತ ಎಣಿಕೆ ನಡೆದಿದ್ದು, ಚುನಾವಣೆ ನಡೆದ 222 ಸೀಟುಗಳಲ್ಲಿ 217 ಸೀಟುಗಳು ಬಿಜೆಪಿ ಪಾಲಾದವು. ಸಿಪಿಐ(ಎಂ) 3 ಸೀಟು ಗೆದ್ದರೆ, ಎಐಟಿಸಿ 1 ಸೀಟು ಗೆದ್ದಿತು. ತಿಪ್ರ ಮೋಥಾ ಮತ್ತೊಂದು ಸೀಟು ಗೆದ್ದಿತು. ಇದರೊಂದಿಗೆ ಇನ್ನೂ 112 ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಹೀಗೆ ರಾಜ್ಯದ ಒಟ್ಟು 329 ಸೀಟುಗಳು ಬಿಜೆಪಿ ತೆಕ್ಕೆಗೆ ಬಿದ್ದರೆ, ಅಗರ್ತಲಾ ನಗರಪಾಲಿಕೆಯ 51 ವಾರ್ಡ್ಗಳಲ್ಲಿ 51 ವಾರ್ಡ್ಗಳೂ ಬಿಜೆಪಿಗೆ ದಕ್ಕಿದ್ದು ವಿಶೇಷವಾಗಿದೆ. ತ್ರಿಪುರಾ ಸ್ಟೇಟ್ ರೈಫಲ್ಸ್ ಮತ್ತು ಸೆಂಟ್ರಲ್ ಪೊಲೀಸ್ ಪಡೆಯನ್ನು ಈ ಸಮಯದಲ್ಲಿ ಹೆಚ್ಚಿನ ಭದ್ರತೆಗಾಗಿ ನಿಯೋಜಿಸಲಾಗಿತ್ತು. (ಏಜೆನ್ಸೀಸ್)