ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡಲು ಸಾಧ್ಯವೇ ಇಲ್ಲ ಎಂದ ಬಿಜೆಪಿ ನಾಯಕ

ravikumar
Published on

ಬಾಗಲಕೋಟೆ: ಟಿಪ್ಪು ಒಬ್ಬ ಮಹಾನ್ ಮತಾಂಧ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಲ್ಲ. ಒನಕೆ ಓಬವ್ವನ ಜಯಂತಿ ಮಾಡಲು ತಯಾರಿದ್ದೇವೆ. ಆದ್ರೆ, ಈ ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಕಿದ್ರೆ ನಾವು ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ್​ ಅವರ ಜಯಂತಿ ಮಾಡ್ತೇವೆ. ಟಿಪ್ಪು ಸುಲ್ತಾನ ಒಬ್ಬ ಮತಾಂಧ, ದೇಶದ್ರೋಹಿ. ದೇಶದಲ್ಲಿ ಲಕ್ಷಾಂತರ ಸಾಮಾನ್ಯ ಜನರನ್ನ ಮತಾಂತರ ಮಾಡಿ, ದೇವಸ್ಥಾನಗಳನ್ನು ಧ್ವಂಸ ಮಾಡಿರುವ ಹಿಂದೂ ವಿರೋಧಿ ಎಂದು ಹೇಳಿದರು.

ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ರವಿಕುಮಾರ್​, ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಮಾತನಾಡಲು ಒಂದು ಗುಲಗಂಜಿಯಷ್ಟು ನೈತಿಕತೆ ಇಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ, ಮುನಿಯಪ್ಪ ಅವರನ್ನ ಸೋಲಿಸಿದ್ದು ಮರೆತುಬಿಟ್ರಾ? ಅಖಂಡ ಶ್ರೀನಿವಾಸರ ಮನೆಗೆ ಬೆಂಕಿ ಬಿದ್ದಾಗ ಸಿದ್ದರಾಮಯ್ಯ ರಕ್ಷಣೆ ಕೊಟ್ರಾ? ನಾವು ಗೋವಿಂದ ಕಾರಜೋಳ ಅವರನ್ನ ಡಿಸಿಎಂ ಮಾಡಿದ್ದೆವು. ನೀವೇನು ಮಾಡಿದ್ದೀರಿ...? ಎಂದು ಕುಟುಕಿದರು.

ಡಾ.ಅಂಬೇಡ್ಕರ್ ಅವರಿಗೆ ಆರಡಿ, ಮೂರಡಿ ಜಾಗ ಕೊಡಲಿಲ್ಲ. ಭಾರತ ರತ್ನ ಕೊಡಲಿಲ್ಲ. ಎರಡು ಸಲ ಅವರನ್ನ ಸೋಲಿಸಿದ್ರು. ಕಾಂಗ್ರೆಸ್ ದಲಿತ ವಿರೋಧಿ ಎನ್ನಲು ಹತ್ತಾರು ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರ, ದಲಿತರ ವಿರೋಧಿ. ಭಾರತದ ವಿರೋಧಿ, ಪಾಕಿಸ್ತಾನದ ಪರ ಎನ್ನಲು ದೊಡ್ಡ ಇತಿಹಾಸ ಇದೆ. ಈ ಬಗ್ಗೆ ಚರ್ಚೆಗೆ ಬಂದರೆ ನಾನು ಎಲ್ಲಿ ಬೇಕಾದರೂ ರೆಡಿ ಇದ್ದೇನೆ ಎಂದು ಕಾಂಗ್ರೆಸ್​​ನವರಿಗೆ ರವಿಕುಮಾರ್ ಸವಾಲ್ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net