ಲುಂಗಿ ಎತ್ತಿಕೊಂಡು ಕುಣಿದಿದ್ದ ಸಿದ್ದರಾಮಯ್ಯರಿಂದ ಗ್ಯಾರಂಟಿ ಕೊಡಲು ಈಗ ಕಂಡೀಷನ್ : ಗೋವಿಂದ ಕಾರಜೋಳ

govind_karjola
Published on

ತುಮಕೂರು: ಚುನಾವಣಾ ಪ್ರಚಾರದ ವೇಳೆ ಲುಂಗಿ ಎತ್ತಿಕೊಂಡು ಕುಣಿದು ಭಾಷಣ ಮಾಡಿದ್ದ ಸಿದ್ದರಾಮಯ್ಯ ಮೊದಲ ಕ್ಯಾಬಿನೆಟ್ ನಲ್ಲಿ ಎಲ್ಲಾ ಗ್ಯಾರಂಟಿ ಘೋಷಿಸುವುದಾಗಿ ಹೇಳಿ, ಈಗ ಮಾತಿಗೆ ತಪ್ಪಿದ್ದಾರೆ, ಕಂಡಿಷನಲ್ ಆಗಿ ಗ್ಯಾರಂಟಿ ಕೊಡಲು ಮುಂದಾಗಿದ್ದಾರೆ, ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಲಾರಂಭಿಸಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ ಗುಡುಗಿದರು.

ನಗರದ ಗಾಜಿನಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ 9ನೇ ವರ್ಷ ಸಂದ ಸಂದರ್ಭದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ನಲ್ಲಿ ಗುಣಮಟ್ಟದ ಊಟವಿಲ್ಲ. ಪಡಿತರದಲ್ಲಿ 10ಕೆಜಿ ನೀಡುವ ಭರವಸೆ ಉಳಿಸಿಕೊಳ್ಳದೆ ಕೇಂದ್ರದ ವಿರುದ್ಧ ಆರೋಪ ಮಾಡುವ ಕಾಂಗ್ರೆಸ್ ಬೇಕಾಬೆಟ್ಟಿಯಾಗಿ ಮಾಡಿದ ಘೋಷಣೆಗಳನ್ನು ಈಡೇರಿಸುವ ಹೊಣೆ ಅವರದ್ದೇ ಎಂಬುದನ್ನು ಮರೆತಿದ್ದಾರೆ ಎಂದು ಹರಿಹಾಯ್ದರು.

ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷವು ಜನರಿಗೆ ಮೋಸ ಮಾಡಿಕೊಂಡು ಬರುತ್ತಿದೆ. ಗರೀಬಿ ಹಠವೊ ಮಾಡ್ತೀವಿ ಎಂದವರು ಇಂದಿಗೂ ಮಾಡಿಲ್ಲ. ಬಿಜೆಪಿ ಕಾರ್ಯಕರ್ತರು ನಿರಾಶರಾಗದೆ ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net