ವಿದ್ಯೆ ಕಲಿಸಿದ ಗುರುಗಳಿಗೆ ರಾಜ್ಯ ಸರ್ಕಾರ ಅವಮಾನ

6udp bjp 2
Published on

ಉಡುಪಿ: ಕುಂದಾಪುರ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ನೀಡಿದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ತಡೆ ಹಿಡಿದಿರುವುದು ವಿದ್ಯೆ ಕಲಿಸಿದ ಗುರುಗಳಿಗೆ ರಾಜ್ಯಸರ್ಕಾರ ಮಾಡಿದ ಅವಮಾನ. ಸರ್ಕಾರದ ಅನ್ಯಾಯಗಳ ವಿರುದ್ದ ಬಿಜೆಪಿ ಸಮರ್ಥವಾಗಿ ಹೋರಾಟ  ಮಾಡುತ್ತಿದ್ದು, ಶಿಕ್ಷಕರಿಗೆ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.


ಶಿಕ್ಷಕರ ಪ್ರಶಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ವಿವಿಧ ಮೋರ್ಚಾಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಶಾಲಾ ಸಮವಸ್ತ್ರವನ್ನು ಹೊರತುಪಡಿಸಿ ಯಾವುದೇ ಧರ್ಮಕ್ಕೆ ಸಂಬಂಧಿಸಿ ವಸ್ತ್ರ, ಹಿಜಾಬ್ ಧರಿಸಬಾರದು ಎಂದು ಹೈಕೋರ್ಟ್ ನೀಡಿದ ಆದೇಶದಂತೆ ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿದ್ದು, ಸರ್ಕಾರದ ಆದೇಶವನ್ನು ಪ್ರಾಂಶುಪಾಲರು ಪಾಲಿಸಿದ್ದಾರೆ. ಈ ಘಟನೆಯನ್ನು ಇಟ್ಟುಕೊಂಡು ದ್ವೇಷ ಸಾಧಿಸುತ್ತಿರುವುದು ಅಕ್ಯಮ್ಯ ಅಪರಾಧ ಎಂದರು.


ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರವೇ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಆಯ್ಕೆ ಮಾಡಿ, ಏಕಾಏಕಿ ಆದೇಶವನ್ನು ತಡೆ ಹಿಡಿದಿರುವುದು ಯಾಕೆ ಎಂದು ಉತ್ತರಿಸಬೇಕು. ಜಿಲ್ಲೆಯ ಐದು ಶಾಸಕರು ಸಿಎಂ ಹಾಗು ಶಿಕ್ಷಣ ಸಚಿವರಿಗೆ ಪತ್ರ ಬರೆದು, ಖುದ್ದು ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇವೆ ಎಂದರು.  ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಕಾಪು ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಮಾಜಿ ಅಧ್ಯಕ್ಷೆ ವೀಣಾ ಶೆಟ್ಟಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು, ಕುಂದಾಪುರ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ವಿಭಾಗ ಸಹ ಪ್ರಭಾರಿ ರಾಜೇಶ್ ಕಾವೇರಿ, ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಪ್ರ. ಕಾರ್ಯದರ್ಶಿ ಅಭಿರಾಜ್ ಸುವರ್ಣ  ಮೊದಲಾದವರು ಉಪಸ್ಥಿತರಿದ್ದರು.  
ಈ ಸಂದರ್ಭದಲ್ಲಿ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಮುಂಭಾಗ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಯಿತು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net