ಜು.28ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ

udp-18-bjp
Published on

ಉಡುಪಿ: ಗ್ರಾಪಂಗಳಲ್ಲಿ ಸರಾಗವಾಗಿ ಸಿಗುತ್ತಿದ್ದ 9/11 ಅಥವಾ ಏಕ ವಿನ್ಯಾಸ ನಕ್ಷೆ ಕೊಡುವ ಜವಾಬ್ದಾರಿಯನ್ನು ನಗರ ಪ್ರಾಧಿಕಾರಕ್ಕೆ ಹಸ್ತಾಂತರಿಸಿ ಅಧಿಕೃತ ಆದೇಶ ಮಾಡಿದ ಹಿನ್ನೆಲೆಯಲ್ಲಿ 9/11 ದಾಖಲೆಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 28ರಂದು ಸೋಮವಾರ ಬೆಳಗ್ಗೆ 11ಕ್ಕೆ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾವಿರಾರು ಕಡತ ವಿವಿಧ ತಾಲೂಕಿನ ಪ್ರಾಧಿಕಾರಗಳಲ್ಲಿ ತುಂಬಿ ತುಳುಕುತ್ತಿದ್ದು, ಅದನ್ನು ಸರಿಪಡಿಸುವ ಬದಲು ಕಾಂಗ್ರೆಸ್​ ಪಕ್ಷ ಜನರಿಗೆ ತಪ್ಪು ಮಾಹಿತಿ ಒದಗಿಸುತ್ತಿದೆ. ಈ ಜನಪರ ಹೋರಾಟಕ್ಕೆ ಪಕ್ಷದ ಎಲ್ಲಾ ಮೋರ್ಚಾಗಳು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಂಸದರು, ಶಾಸಕರು ಬೆಂಬಲ ನೀಡಲಿದ್ದಾರೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಏಕ ವಿನ್ಯಾಸ ನಕ್ಷೆ ಗೊಂದಲ ಇಡೀ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ. ಈ ಸಮಸ್ಯೆಯ ಮೂಲವನ್ನು ಜನತೆಗೆ ಮನವರಿಕೆ ಮಾಡಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಲವಾದ ಹೋರಾಟ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್​ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿಠಲ ಪೂಜಾರಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net