ಪುತ್ತೂರು: ದೇಶದ ಪ್ರಧಾನಿ ಅನಾಗರಿಕ ರೀತಿಯಲ್ಲಿ ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಬಾಂಗ್ಲಾದೇಶ ಉದಾಯಹರಣೆಯಾಗಿದೆ. ಕೇವಲ ಹಿಂದು ಧರ್ಮವನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದೆ. ಮಠ ಮಂದಿರ, ದೇವಸ್ಥಾನಗಳನ್ನು ಕೊಳ್ಳೆಹೊಡೆಯುತ್ತಿದೆ. ದೇಶ ಇದನ್ನು ಗಂಭೀರವಾಗಿ ಗಮನಿಸುತ್ತಿದ್ದು, ಡಿ.೪ರಂದು ಬೆಳಗ್ಗೆ ೧೦ಕ್ಕೆ ಮಂಗಳೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಬಾಂಗ್ಲಾದೇಶದ ಹಿಂದುಗಳಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವ ಕಾರ್ಯ ನಡೆಯುತ್ತಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶಕ್ಕೆ ಸರಿಯಾದ ದಿಕ್ಕು ತೋರಿಸಬೇಕೆಂಬ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರಧಾನಿಗೆ ಬೆಂಬಲ ನೀಡಲು ಹಾಗೂ ಆ ಭಾಗದ ಹಿಂದುಗಳನ್ನು ರಕ್ಷಣೆ ಮಾಡುವುದಕ್ಕೆ, ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದು ರಾಜಕೀಯ ಪ್ರೇರಿತವಾಗಿರದೆ ಹಿಂದು ಸಮಾಜ ರಕ್ಷಣೆಯ ನಿಟ್ಟಿನಲ್ಲಿ ನಡೆಯಲಿದ್ದು, ಬಿಜೆಪಿ ಪುತ್ತೂರು ಕ್ಷೇತ್ರದಿಂದ ೫ ಸಾವಿರ ಹಿಂದು ಗಳನ್ನು ಕರೆದುಕೊಂಡು ಹೋಗಲಿದೆ. ಗ್ರಾಮದಿಂದ ವಾಹನಗಳ ವ್ಯವಸ್ಥೆಯನ್ನು ಮಾಡಿ ಬೂತು ಮಟ್ಟದಿಂದ ೨೦ ಮಂದಿಯನ್ನು ಹೊರಡಿಸುವ ಮೂಲಕ ಪ್ರತಿಭಟನೆ ಯಶಸ್ವಿಗೊಳಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ದೇಶಕ್ಕೂ ಇಂತಹ ಪರಿಸ್ಥಿತಿ ಬರಬಹುದಾ ಎಂಬ ಅರಿವನ್ನು ಇಟ್ಟುಕೊಂಡು ಜನರು ಇದರಲ್ಲಿ ಭಾಗವಹಿಸಬೇಕಾಗಿದೆ. ಬಹುಸಂಖ್ಯಾತ ಹಿಂದುಗಳು ೧೭ಲಕ್ಷ ಹಿಂದುಗಳಿಗೆ ಜತೆಗಿದ್ದಾರೆ ಎಂಬ ಸಂದೇಶ ನೀಡುವ ಕಾರ್ಯ ಪ್ರತಿಭಟನೆಯ ಮೂಲಕ ಮಾಡಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ, ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.