

ಉಡುಪಿ: ಜಿಲ್ಲೆಯಲ್ಲಿ ಕಾಡುತ್ತಿರುವ ಏಕ ವಿನ್ಯಾಸ ನಕ್ಷೆ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ತಿಂಗಳೊಳಗೆ ಈ ಸಮಸ್ಯೆ ಪರಿಹರಿಸದಿದ್ದರೆ ಜಿಲ್ಲಾದ್ಯಂತ ಪ್ರಾಧಿಕಾರಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
9/11 ಅರ್ಜಿ ನಮೂನೆ ಸಿಗದೆ ಬಡವರಿಗೆ ಮನೆಕಟ್ಟಲು ಕಷ್ಟವಾಗುತ್ತಿದೆ. ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಕಟ್ಟಡ ಕಾರ್ಮಿಕರೂ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಪ್ರತಿಭಟನೆ ಮೂಲಕ ಎಚ್ಚರಿಸಿದರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಾಸಕರ ಸಭೆ ನಡೆದರೂ ಲಪ್ರದವಾಗಿಲ್ಲ. ಸಮಸ್ಯೆಗೆ ಸ್ಪಂದಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಕಾಣೆಯಾಗಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸದಿದ್ದರೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು. ಜನಾಂದೋಲನಕ್ಕೆ ಕರೆ ನೀಡಲಾಗುವುದು ಎಂದು ಹೇಳಿದರು.
ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠಲ ಪೂಜಾರಿ, ಮುಖಂಡರಾದ ಅದರ್ಶ ನಾಯರಿ, ಸುಶಾಂತ್ ಬ್ರಹ್ಮಾವರ, ಸುರೇಂದ್ರ ಕುಲಾಲ್ ಉಪಸ್ಥಿತರಿದ್ದರು.