

ಮೈಸೂರು: ಎಲ್ಲೆಲ್ಲೂ ಕರನಾ ವೈರಸ್ ಆತಂಕವಿದೆ. ಮೂರನೇ ಹಂತದ ಲಾಕ್ಡೌನ್ ನಡೆಯುತ್ತಿದೆ. ಮನೆಯಿಂದ ಹೊರಬರುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಸರ್ಕಾರಗಳು ಹೇಳುತ್ತಲೇ ಇವೆ. ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ಹಾಗೊಮ್ಮೆ ಹೊರಬರುವುದೇ ಆದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂಬಿತ್ಯಾದಿ ನಿಯಮಗಳನ್ನೂ ಹೇರಲಾಗಿದೆ. ಇದನ್ನೂ ಓದಿ: 24 ಗಂಟೆಯಲ್ಲಿ 63 ಕೊವಿಡ್-19 ಪ್ರಕರಣಗಳು ಪತ್ತೆ; 1000ದತ್ತ ದಾಪುಗಾಲು ಹಾಕುತ್ತಿದೆ ಸೋಂಕಿತರ ಸಂಖ್ಯೆ
ಆದರೆ ಇಲ್ಲೋರ್ವ ಶಾಸಕನ ಪುತ್ರ ಇಂಥ ಸಮಯದಲ್ಲೂ ಕುದುರೆ ಸವಾರಿ ಮಾಡಿ ಮೋಜು ಮಾಡಿದ್ದಾರೆ. ವೈರಲ್ ಆದ ವಿಡಿಯೋ ನೋಡಿ ಜನಸಾಮಾನ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆಯ ಬಿಜೆಪಿ ಶಾಸಕ ನಿರಂಜನ್ ಕುಮಾರ್ ಅವರ ಪುತ್ರ ಪಟ್ಟಣದ ಐಟಿಐ ಕಾಲೇಜಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಸವಾರಿ ಮಾಡಿದ್ದಾರೆ.ಅದೂ ಮಾಸ್ಕ್ ಕೂಡ ಧರಿಸಿದೆ ಸವಾರಿ ಮಾಡಿದ ಫೋಟೋ, ವಿಡಿಯೋಗಳು ವೈರಲ್ ಆಗಿವೆ.
ಸೋಮವಾರ ವೈರಲ್ ಆದ ಕುದುರೆ ಸವಾರಿಯ ವಿಡಿಯೋ ನೋಡಿದ ಜನರು, ಲಾಕ್ ಡೌನ್ ನಿಯಮವನ್ನು ಮೀರಿದ ಶಾಸಕನ ಪುತ್ರನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಶಾಸಕರು, ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ. ವಿಡಿಯೋದಲ್ಲಿ ಇರುವುದು ನನ್ನ ಮಗನೇ ಹೌದು. ಸರಿಯಾಗಿ ವಿಚಾರಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಮಗನ ಬಳಿ ಕೇಳುತ್ತೇನೆ. ತಪ್ಪಿದ್ದರೆ ಖಂಡಿತ ಅವನಿಗೆ ಬುದ್ಧಿ ಹೇಳುತ್ತೇನೆ ಎಂದಿದ್ದಾರೆ. ಹಾಗೇ, ಲಾಕ್ಡೌನ್ ಸಮಯದಲ್ಲಿ ಕುದುರೆ ಸವಾರಿ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ನಾನಿದನ್ನು ಸಮರ್ಥನೆ ಮಾಡಿಕೊಳ್ಳಲು ಹೇಳುತ್ತಿಲ್ಲ ಎಂದು ಶಾಸಕರು ಹೇಳಿದ್ದಾರೆ. ಇದನ್ನೂ ಓದಿ: ಪಾಸ್ ಸಿಕ್ಕಿದೆ.. ಮಾತನಾಡಲು ಮಗನೇ ಇಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾಮರಾಜನಗರ ಎಸ್ಪಿ, ಲಾಕ್ಡೌನ್ ಸಮಯದಲ್ಲಿ ಕುದುರೆ ಸವಾರಿ ಮಾಡುವುದರಿಂದ ನಿಯಮ ಉಲ್ಲಂಘನೆಯಾದಂತೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ಶಾಸಕರ ಪುತ್ರನ ಕುದುರೆ ಸವಾರಿ ಬಗ್ಗೆ ಇನ್ನೊಮ್ಮೆ ಪರಿಶೀಲಿಸಿ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.