

ಬೆಂಘಳೂರು: ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಪೂರ್ವಬಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ಲೋಪದೋಷಗಳಿಗೆ ಉದ್ಯೋಗಕಾಂಕ್ಷಿಗಳು ಹಾಗೂ ವಿಪಕ್ಷಗಳು ಕಿಡಿಕಾರಿದ್ದು, ರಾಜ್ಯ ಸರ್ಕಾರ ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿವೆ. ಇನ್ನೂ ಈ ಕುರಿತು ಮಾತನಾಡಿರುವ ಶಾಸಕ ಬಸನ್ಗೌಡ ಪಾಟೀಲ್ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕ ಲೋಕ ಸೇವಾ ಆಯೋಗ ತಯಾರಿಸಿರುವ ಪ್ರಶ್ನೆ ಪತ್ರಿಕೆಯಲ್ಲಿರುವ ಗೊಂದಲಗಳನ್ನು, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೊರಡಿಸಿರುವ ಪ್ರಕಟಣೆ ಹಾಸ್ಯಾಸ್ಪದವಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿರುವ ದೋಷಗಳು ಸ್ವಯಂ ವಿವರಣಾತ್ಮಕ [self -explanatory] ಆಗಿದೆ.
ಇದನ್ನೂ ಓದಿ: ಹಿರಿಯ ನಾಯಕ, ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ನಿಧನ
ಯಾವುದೇ ಪ್ರಶ್ನೆ ಪತ್ರಿಕೆ ತಯಾರಾದ ನಂತರ ಅದರ logical correctness, flow, ತರ್ಜುಮೆಯ ಗುಣಮಟ್ಟ, ಆಂಗ್ಲ ಹಾಗೂ ಕನ್ನಡದಲ್ಲಿ ಪ್ರಶ್ನೆಗಳ ಸಾಮ್ಯತೆ, ವ್ಯಾಕರಣ ದೋಷ, ಮುದ್ರಣದ ಗುಣಮಟ್ಟ, ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ದ ಅರ್ಥಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿ, ಪ್ರೂಫ್ ಮಾಡಿದ ನಂತರ ಬಿಡುಗಡೆ ಮಾಡಬೇಕು.
ಜಾಲತಾಣಗಳಲ್ಲಿ, ಪ್ರಮುಖ ಪತ್ರಿಕೆಗಳಲ್ಲಿ ನೀವು ಮಾಡಿದ ತಪ್ಪುಗಳು ಚರ್ಚೆಯಾದಾಗ ಆಕ್ಷೇಪಣೆ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಿರುವುದು ಆಯೋಗದ incompetence ತೋರಿಸುತ್ತದೆ. ಪರೀಕ್ಷಾರ್ಥಿಗಳಿಗೆ, ಪತ್ರಿಕೆಗಳು ಸವಿವರವಾಗಿ ಪ್ರಶ್ನೆ ಪತ್ರಿಕೆಯಲ್ಲಾದ ತಪ್ಪುಗಳನ್ನು ತೋರಿಸಿದ್ದು ಆಯೋಗದ ಕಣ್ಣಿಗೆ ಬೀಳದಿರುವುದು ವಿಷಾದನೀಯ. ಈ ಕೂಡಲೇ ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ನಿಮ್ಮ ಇಲಾಖೆಯಲ್ಲಿ ಕಿಂಚಿತ್ತಾದರೂ ಶಿಸ್ತಿದೆ ಎಂದು ಮೇಲ್ಪಂಕ್ತಿ ಹಾಕಿಕೊಡಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಆಗ್ರಹಿಸಿದ್ದಾರೆ.