

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ಜತೆಗೆ ಎಲ್ಲದ್ದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಳಿಕಾಂಭ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಯಾವಾಗ ಮುರಿದು ಬೀಳುತ್ತದೋ ಗೊತ್ತಿಲ್ಲ. ಎರಡು ಕಾಲನ್ನು ಸಿದ್ದರಾಮಯ್ಯ ಮತ್ತೆರಡು ಕಾಲನ್ನು ಡಿ.ಕೆ.ಶಿವಕುಮಾರ್ ಹಿಡಿದು ಎಳೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಜನೋಪಯೋಗಿ ಕೆಲಸಕ್ಕೆ ಅಡ್ಡಗಾಲು ಹಾಕಿದೆ. ಸಾಮಾನ್ಯವಾಗಿ ಕಾಯ್ದೆಗಳಿಗೆ ತಿದ್ದುಪಡಿ ತರುವುದು ವಾಡಿಕೆಯಾಗಿತ್ತು. ಆದರೆ ರಾಜ್ಯ ಸರ್ಕಾರ ರದ್ದು ಮಾಡುವ ಮಟ್ಟಕ್ಕೆ ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
2013ರಲ್ಲಿ 252 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ನಂತರದ 2019ರಲ್ಲಿ 320ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಂದಿನ 2024ರಲ್ಲಿ 350 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ರಾಜ್ಯದಲ್ಲಿ ನಾವು ಸೋತಿದ್ದೇವೆ. ಸೋತ ಮಾತ್ರಕ್ಕೆ ಹತಾಶರಾಗುವುದು ಬೇಡ, ವಾಜಪೇಯಿ ಅವರೂ ಸೋತಿದ್ದರು. ಈಗ ನಾವು ಜನಾದೇಶವನ್ನು ಒಪ್ಪಿಕೊಂಡಿದ್ದೇವೆ. ಎಲ್ಲಿ ಸೋತಿದ್ದೇವೋ ಅಲ್ಲಿಂದಲೇ ನಾವು ಮತ್ತೆ ಗೆದ್ದು ತೋರಿಸಬೇಕಾದ ಸಮಯ ಬಂದಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.
ಕೊಟ್ಟ ಮಾತು ತಪ್ಪಿ ಕಾಂಗ್ರೆಸ್ ಪರಿತಪಿಸುತ್ತಿದೆ. ಸಿದ್ದರಾಮಯ್ಯ ನರಳಾಟ ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎನ್ನುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಭರವಸೆ ನೀಡುವ ಮುನ್ನ ಎಲ್ಲವನ್ನೂ ಯೋಚಿಸಿ ನಿರ್ಧಾರ ಮಾಡಬೇಕಿತ್ತು. ಅದು ಬಿಟ್ಟು ಈಗ ಕೇಂದ್ರದ ಕಡೆಗೆ ಕೈ ತೋರಿಸುವುದು ಸರಿಯಲ್ಲ. ರಾಜ್ಯದ ಹಿತಾಸಕ್ತಿ ಕಾಂಗ್ರೆಸ್ನವರಿಗೆ ಬೇಕಿಲ್ಲ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ವಿಜಯಶಂಕರ್, ಮಾಜಿ ಶಾಸಕರಾದ ನಿರಂಜನ್ಕುಮಾರ್, ಅಶ್ವತ್ಥನಾರಾಯಣ, ಮುಖಂಡರಾದ ಪ್ರೊ.ಮಲ್ಲಿಕಾರ್ಜುನ್, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಮುನಿರಾಜು, ಎಸ್.ಪಿ.ಸ್ವಾಮಿ, ಡಾ.ಇಂದ್ರೇಶ್ ಇತರರಿದ್ದರು.