More

    ತಪ್ಪನ್ನು ತಿದ್ದಿಕೊಂಡು ಚುನಾವಣೆಗೆ ಸಜ್ಜಾಗೋಣ: ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ

    ಮಂಡ್ಯ: ಹಳೇ ಮೈಸೂರು ಪ್ರಾಂತ್ಯದಲ್ಲಿ ಅದರಲ್ಲಿಯೂ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಬೇಕೆನ್ನುವ ಹಠದೊಂದಿಗೆ ಬಿಜೆಪಿ ಮಾಡಿದ ತಂತ್ರಗಾರಿಕೆ ಫಲಿಸಲಿಲ್ಲ. ಏಳು ಕ್ಷೇತ್ರದಲ್ಲಿಯೂ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ಈ ಹಿನ್ನೆಲೆಯಲ್ಲಿ ಗುರುವಾರ ನಗರದ ಪಕ್ಷದ ಕಚೇರಿಯಲ್ಲಿ ಆತ್ಮಾವಲೋಕನ ಸಭೆ ಆಯೋಜಿಸಿ ಸೋಲಿನ ಪರಾಮಾರ್ಶೆ ಮಾಡಲಾಗಿದೆ.
    ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ವಿಷಯ ಬಗ್ಗೆ ಚರ್ಚೆ ನಡೆದಿದೆ. ಪ್ರಮುಖವಾಗಿ ಜಿಲ್ಲೆಯ ಜನರನ್ನು ತಲುಪುವಲ್ಲಿ ವಿಫಲವಾದ ಹಾಗೂ ಬೂತ್‌ಮಟ್ಟದಲ್ಲಿ ಎಡವಿದರ ಕುರಿತು ಅಭಿಪ್ರಾಯ ಪಡೆದುಕೊಳ್ಳಲಾಯಿತು. ನಿರೀಕ್ಷೆಯಂತೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಪಕ್ಷಕ್ಕೆ ಬಂದ ಮತ ಗಳಿಕೆಯ ಪ್ರಮಾಣ ಹೆಚ್ಚಿರುವುದು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಮಾಧಾನ ತರಿಸಿದೆ.
    ಇನ್ನು ಚುನಾವಣೆಯಲ್ಲಿ ಪಕ್ಷ ತಪ್ಪು ಮಾಡಿಕೊಂಡಿದೆಲ್ಲಿ ಎನ್ನುವ ಕುರಿತು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಂತೆ ಇಡೀ ಚುನಾವಣೆಯಲ್ಲಿ ಕೇಂದ್ರ ನಾಯಕರ ಹೆಸರಿನಲ್ಲಿ ಮಾಡಿದ್ದು, ಸ್ಥಳೀಯವಾಗಿ ಜನರನ್ನು ತಲುಪುವಲ್ಲಿ ವಿಫಲವಾಗುವಂತಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳು ಹಾಗೂ ಪ್ರಣಾಳಿಕೆಯಲ್ಲಿದ್ದ ಮುಖ್ಯ ಅಂಶಗಳನ್ನು ಜನರಿಗೆ ತಿಳಿಸಲಿಲ್ಲ. ಇದರೊಟ್ಟಿಗೆ ಕಾಂಗ್ರೆಸ್‌ನ ಗ್ಯಾರಂಟಿ ಭರವಸೆಗೆ ಜನರು ವಾಲುವಂತಾದ ಪರಿಣಾಮ ಅವರು ಗೆಲ್ಲಲ್ಲು ಸಾಧ್ಯವಾಯಿತು ಎನ್ನುವ ಅಂಶವನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು.
    ಬೂತ್‌ಮಟ್ಟದಿಂದಲೇ ತಯಾರಿ: ಚುನಾವಣೆ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಮಾಡಿರುವ ತಪ್ಪನ್ನು ತಿದ್ದುಕೊಂಡು ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗುವ ಬಗ್ಗೆ ತೀರ್ಮಾನ ಮಾಡಲಾಯಿತು. ಅದರಂತೆ ಬೂತ್‌ಮಟ್ಟದಿಂದಲೇ ತಯಾರಿ ಮಾಡಿಕೊಳ್ಳುವುದರ ಜತೆಗೆ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಫಲಾನುಭವಿಗಳೊಂದಿಗೆ ಸಮಾವೇಶ ಮಾಡುವ ಯೋಜನೆ ರೂಪಿಸಲು ನಿರ್ಧರಿಸಲಾಯಿತು. ಇದರೊಟ್ಟಿಗೆ ಪಕ್ಷ ನೀಡುವ ಜವಾಬ್ದಾರಿಯನ್ನು ಪಾಲಿಸುವುದರ ಜತೆಗೆ ಸಂಘಟನೆ ಮಾಡುವ ಸೂಚನೆ ನೀಡಲಾಗಿದೆ.
    ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಪರಾಜಿತ ಅಭ್ಯರ್ಥಿಗಳಾದ ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಜಿ.ಮುನಿರಾಜು, ಡಾ.ಎನ್.ಎಸ್.ಇಂದ್ರೇಶ್, ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts