

ಮಂಗಳೂರು : ರಾಜ್ಯದಲ್ಲಿ ಅಭಿವೃದ್ದಿ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ. ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಗುದ್ದಲಿ ಪೂಜೆ ನಡೆದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತಂದ ಮತದಾರರಿಗೆ ಈಗ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ವಿಧಾನ ಪರಿಷತ್ನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಸಿದ್ಧತೆ ಸಂಬಂಧಿಸಿದ ಮಂಗಳೂರಿನಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆಯಾ ಎಂದು ಜನತೆ ಪ್ರಶ್ನಿಸುವಂತಾಗಿದೆ ಎಂದರು.
ಪಾಕಿಸ್ತಾನ್ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಜೈಲಿಗೆ ಹಾಕಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡಾ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ರಕ್ಷಣೆ ಇರುವ ಕಾರಣ ದುಷ್ಕರ್ಮಿಗಳು ಚೆನ್ನಗಿರಿ ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಲು ಯತ್ನಿಸಿದ್ದಾರೆ. ಕಾಂಗ್ರೆಸ್ ದೇಶದ್ರೋಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
* ಹದಗೆಟ್ಟ ಶಿಕ್ಷಣ ಇಲಾಖೆ
ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ (ಎಸ್ಇಪಿ) ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಷ್ಟೇ ಅಲ್ಲ, ಪೋಷಕರು ಕೂಡಾ ಇದರಿಂದ ಚಿಂತೆಗೆ ಒಳಗಾಗಿದ್ದಾರೆ. ಶಿಕ್ಷಣದ ನೀತಿ ನಿಯಮಗಳ ಕಲ್ಪನೆಯೂ ಇಲ್ಲದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಅವರು ಹೇಳಿದರು.
ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಅನೇಕರು ಆಕಾಂಕ್ಷಿಗಳಾಗಿದ್ದರೂ ವರಿಷ್ಠರ ತೀರ್ಮಾನ ಅಂತಿಮ. ಸಂಘಟನೆಯಲ್ಲಿ ಶ್ರದ್ಧೆ ಇರುವವರು ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕೆಲವರು ಗೆದ್ದ ಮೇಲೆ ಬಿಜೆಪಿಗೆ ಬರುತ್ತೇವೆ ಎನ್ನುವ ಮಾತು ಹೇಳುತ್ತಿದ್ದಾರೆ. ಅದಕ್ಕೆ ಮತದಾರರು ಮರುಳಾಗಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುವುದೇ
ಕಾರ್ಯಕರ್ತರ ಗುರಿಯಾಗಿದೆ ಎಂದರು.
*ಜನಾಭಿಪ್ರಾಯದ ಚುನಾವಣೆ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಮಾತನಾಡಿ ‘ ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಅಭಿವೃದ್ದಿ ಶೂನ್ಯ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಭಿಪ್ರಾಯದ ಚುನಾವಣೆಯಾಗಿದೆ. ಈ ಹಿಂದೆ ಬಿಜೆಪಿ ನಿರಂತರ ಗೆಲುವು ಸಾಧಿಸಿದ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಮತ್ತೆ ಜಯಭೇರಿ ಬಾರಿಸಲು ವ್ಯವಸ್ಥಿತ ಪ್ರಚಾರ ಕಾರ್ಯ ನಡೆದಿದೆ ಎಂದರು.
ಪಕ್ಷದ ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸಿ ಗೆಲುವಿಗೆ ಸಹಕರಿಸುವಂತೆ ನೈಋತ್ಯ ಪದವೀಧರ ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ವಿನಂತಿಸಿದರು.
ಶಾಸಕರಾದ ರಾಜೇಶ್ ನಾಕ್, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಎಂಎಲ್ಸಿ ಪ್ರತಾಪಸಿಂಹ ನಾಯಕ್, ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ಬಿಜೆಪಿ ಪ್ರಮುಖರಾದ ಕ್ಯಾ.ಗಣೇಶ್ ಕಾರ್ಣಿಕ್ ,ಉದಯಕುಮಾರ್ ಶೆಟ್ಟಿ, ಡಿ.ಎಸ್. ಅರುಣ್, ದತ್ತಾತ್ರೇಯ, ತಮ್ಮೇಶ್ ಗೌಡ, ರಾಜೇಶ್ ಕಾವೇರಿ, ನಿತಿನ್ ಕುಮಾರ್, ಮಂಜುಳಾ ರಾವ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿ, ವಿಕಾಸ್ ಪುತ್ತೂರು ವಂದಿಸಿದರು. ಯತೀಶ್ ಆರ್ವಾರ ಕಾರ್ಯಕ್ರಮ ನಿರೂಪಿಸಿದರು.
* ಕನ್ನಡ ತಿಳಿಯದ ಶಿಕ್ಷಣ ಸಚಿವರನ್ನು ಬದಲಾವಣೆ ಮಾಡುವಂತೆ ಶಿಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಮೈತ್ರಿಕೂಟದ ಸದಸ್ಯರು ಕೂಡಾ ಶಿಕ್ಷಣ ಸಚಿವರ ಬದಲಾವಣೆಗೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಲಿದ್ದೇವೆ.
- ಎಸ್.ಎಲ್.ಭೋಜೇಗೌಡ ,ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ
* ಪಿಕ್ ಪಾಕೆಟ್ ಕಾಂಗ್ರೆಸ್ ಸರ್ಕಾರವನ್ನು ಬದಲಾವಣೆ ಮಾಡಬೇಕಾಗಿದೆ. ಗುಡಿಸಿದರೆ ಕಸ ಇರಬಾರದು. ಬಡಿಸಿದರೆ ಹಸಿವು ಇರಬಾರದು. ಓಟು ಹಾಕಿದರೆ ಕಾಂಗ್ರೆಸ್ ಇರಬಾರದು.
- ಡಾ.ಧನಂಜಯ ಸರ್ಜಿ , ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ