ಬಿಜೆಪಿ ನಾಯಕರಿಗೆ ಇಂದಿರಾ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

rai
Published on

ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೆಸರಿನಲ್ಲಿ ಬಿಜೆಪಿ ನಾಯಕರು ಕರಾಳ ದಿನ ಆಚರಿಸುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಬಿಜೆಪಿಯ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಿಂದ ವಿಪಕ್ಷದವರಿಗೆ ತೊಂದರೆ ಆಗಿರಬಹುದು. ಆದರೆ ದುರ್ಬಲ ವರ್ಗದವರಿಗೆ ಯಾರಿಗೂ ತೊಂದರೆ ಆಗಿಲ್ಲ. ಜೀತಪದ್ಧತಿ, ಋಣಭಾರ ಮುಕ್ತಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಫಲಾನುಭವಿಗಳು ದ.ಕ. ಜಿಲ್ಲೆಯವರು ಎಂಬುದು ವಾಸ್ತವ ಎಂದರು.

ಇಂದಿರಾ ಗಾಂಧಿಯವರ ಭೂ ಮಸೂದೆ ಕಾನೂನು ದ.ಕ.ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನವಾಗಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದಲೂ ಲಾಭವಾಗಿದೆ. 20 ಅಂಶಗಳ ಕಾರ್ಯಕ್ರಮಗಳು, ನಿವೇಶನ, ದರ್ಖಾಸ್ತು ಭೂಮಿ ಹೀಗೆ ಬಡವರ ಸಬಲೀಕರಣದ ಕಾರ್ಯಕ್ರಮ ಇಂದಿರಾಗಾಂಧಿ ಕಾಲದಲ್ಲಿ ಆಗಿದೆ ಎಂಬುದನ್ನು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವವರಿಗೆ ನೆನಪಿಸಬೇಕಾಗಿದೆ. ತುರ್ತು ಪರಿಸ್ಥಿತಿಯ ಬಳಿಕವೂ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಭಾರೀ ಮತಗಳಿಂದ ಜಯ ಗಳಿಸಿದೆ. ಇದು ಇಂದಿರಾಗಾಂಧಿಯವರು ಮಾಡಿದ ಜನಪರ ಕಾರ್ಯಗಳನ್ನು ಜಿಲ್ಲೆಯ ಜನತೆ ಒಪ್ಪಿಕೊಂಡ ಕಾರಣದಿಂದ. ದೇಶದ ಸಮಗ್ರತೆಗಾಗಿ ಪ್ರಾಣ ಕೊಟ್ಟವರನ್ನು ಅವಮಾನಿಸುವ ಕಾರ್ಯ ಬಿಜೆಪಿಯಿಂದ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತನಾಗಿ ಇಂದಿರಾಗಾಂಧಿಯವರ ಪ್ರಗತಿಪರ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುವುದು ನನ್ನ ಜವಾಬ್ಧಾರಿ ಎಂದವರು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಜರಾತ್ ನರಮೇಧ, ಗೋಧ್ರಾ ಹತ್ಯಾಕಾಂಡ, ಭೀಮಾ ಕೊರೆಗಾಂವ್ ಪ್ರಕರಣ, ಇಡಿಯನ್ನು ಬಳಸಿಕೊಂಡು ವಿಪಕ್ಷ ನಾಯಕರನ್ನು ಜೈಲಿಗೆ ಹಾಕುವುದು, ಪತ್ರಕರ್ತರ ಮೇಲಿನ ದಬ್ಬಾಳಿಕೆ ಮಾಡಿರುವ ಬಿಜೆಪಿ ಇಂದಿರಾ ಗಾಂಧಿ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು.

ದೇಶದ ನಾಯಕರು ವಿದೇಶಕ್ಕೆ ಹೋಗುವಾಗ ಅಲ್ಲಿ ಮಹಾತ್ಮಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ. ಅಂತಹ ಉನ್ನತ ನಾಯಕತ್ವ ಮಹಾತ್ಮಗಾಂಧಿಯವರದ್ದು. ಆದರೆ ಇಲ್ಲಿ ಕೆಲವರು ಗಾಂಧಿ ಪ್ರತಿಮೆಗೆ ಗುಂಡು ಹೊಡೆಯುವ ನಾಟಕವಾಡಿ ವಿಜೃಂಭಿಸುತ್ತಾರೆ. ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುತ್ತಾರೆ ಎಂದು ರಮಾನಾಥ ರೈ ಹೇಳಿದರು.

ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಅಪ್ಪಿಲತಾ, ಪೃಥ್ವಿರಾಜ್, ಅಶೋಕ್ ಡಿ.ಕೆ., ಅಬ್ಬಾಸ್ ಅಲಿ, ಜಯಶೀಲ ಅಡ್ಯಂತಾಯ, ಜೆ. ಸಲೀಂ, ಇಬ್ರಾಹಿಂ ನವಾಜ್, ಸುಹಾನ್ ಆಳ್ವ, ದಿನೇಶ್‌ಕುಮಾರ್, ನಿತ್ಯಾನಂದ ಶೆಟ್ಟಿ, ಶಬೀರ್, ಸುನಿಲ್ ಬಜಿಲಕೇರಿ, ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net