

ಬೆಂಗಳೂರು: ಕುಡಿಯುವ ನೀರಿನ ಅಭಾವದ ಬಗ್ಗೆ ವಿರೋಧ ಪಕ್ಷಗಳು ರಾಜಕೀಯ ಟೀಕೆ ಬಿಟ್ಟು ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ಸಿದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ವಿರೋಧ ಪಕ್ಷದವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಇನ್ನೇನು ಇಲ್ಲ. ಅವರು ರಚನಾತ್ಮಕ ಸಲಹೆ ಕೊಟ್ಟರೆ ನಾವು ಸ್ವೀಕರಿಸಲು ಸಿದ್ಧ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಟ್ಯಾಂಕರ್ ಹಾಗೂ ಖಾಸಗಿಯವರನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮಾಫಿಯಾ ತಡೆಗಟ್ಟಿದ್ದೇವೆ ಎಂದು ಹೇಳಿದರು.
ನೀರನ್ನು ಪೂರೈಸಲು ನಿರ್ಧರಿಸಲಾಗಿದೆ: ಶೇ.50ರಷ್ಟು ಕೊಳವೆಬಾವಿಗಳು ಬರಿದಾಗಿದೆ. ಸಾವಿರಾರು ಟ್ಯಾಂಕರ್ ಗಳನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಂಡು ನೀರಿನ ಮೂಲಗಳಿರುವ ಕಡೆಗಳಿಂದ ನೀರನ್ನು ಪೂರೈಸಲು ನಿರ್ಧರಿಸಲಾಗಿದೆ. ದೂರದಿಂದ ನೀರು ಪೂರೈಸುವ ಕಾರಣ ಟ್ಯಾಂಕರ್ ನೀರಿನ ದರ ನಿಗಧಿಯ ನಿರ್ಧಾರ ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಇನ್ನು ರಾಜ್ಯದಲ್ಲಿ ಖಾಲಿ ಇರುವ ದೊಡ್ಡ ಹಾಲಿನ ಟ್ಯಾಂಕರ್ ಗಳನ್ನ ನೀರು ಪೂರೈಸಲು ಬಳಸಲಾಗುವುದು ಎಂದು ತಿಳಿಸಿದರು.
ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಇನ್ನು ಬೆಂಗಳೂರಿನ ಹೊರವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಕೆ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮಾಧ್ಯಮಗಳಲ್ಲಿ ನೀರಿನ ಆಹಾಕಾರದ ಬಗ್ಗೆ ತೋರಿಸುತ್ತಿದ್ದೀರಿ. ಕೊಳವೆ ಬಾವಿಗಳು ಬತ್ತಿದಾಗ ಆಹಾಕಾರಾ ಉದ್ಭವಿಸುತ್ತದೆ. ನಾವು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು.
ಕಾರು ತೊಳೆಯಲು ನೀರು ಬಳಸಬೇಡಿ: ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಕಾರು ವಾಹನ ತೊಳೆಯಲು ಹಾಗೂ ಇತರೆ ಬಳಕೆಗೆ ಬಳಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ನೀರಿನ ಬೆಲೆ ಎಲ್ಲರಿಗೂ ಅರ್ಥವಾಗಬೇಕು. ನಾವು ಮೇಕೆದಾಟು ಯೋಜನೆ ಯಾವ ಕಾರಣಕ್ಕೆ ಹೋರಾಟ ಮಾಡಿದೆವು? ಈ ಕಾರಣಕ್ಕೆ ಹೋರಾಟ ಮಾಡುತ್ತಿದ್ದೆವು. ಕಾವೇರಿ ನೀರನ್ನು ನಾವು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಖಾಸಗಿ ಟ್ಯಾಂಕರ್ ಗಳಿಗೆ ಸಿಗುವ ನೀರು ಸರ್ಕಾರಕ್ಕೆ ಯಾಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, "ಖಾಸಗಿ ಟ್ಯಾಂಕರ್ ಗಳು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿವೆ ಎಂದರು.
ನೋಡಲ್ ಅಧಿಕಾರಿ ನೇಮಕ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ. ಬೆಂಗಳೂರು ನಗರ ಕಾವೇರಿ ನೀರನ್ನು ಅವಲಂಬಿಸಿದೆ. ಬೆಂಗಳೂರು ಗ್ರಾಮಾಂತರದಿಂದಲೇ ಹೆಚ್ಚು ಟ್ಯಾಂಕರ್ ಮೂಲಕ ನೀರು ಬರುತ್ತಿದೆ ಎಂದು ತಿಳಿಸಿದರು.