

ಉಪ್ಪಳ: ತೀವ್ರ ಜನದಟ್ಟಣೆಯ ಸಜಂಕಿಲ- ಬಾಯರ್ ರಸ್ತೆ, ಕುರುಡಪದವು- ಲಾಲ್‌ಬಾಗ್ ರಸ್ತೆ, ಹೊಸಂಗಡಿ- ಮಜಿಬೈಲ್- ಕಂಗುಮೆ ರಸ್ತೆ, ವರ್ಕಾಡಿ- ದೈಗೋಳಿ, ಗುವೆದಪಡ್ಪು ರಸ್ತೆ, ಮಂಜೇಶ್ವರ- ಕೆದುಂಬಾಡಿ ರಸ್ತೆಗಳನ್ನು ಸಂಚಾರ ಯೋಗ್ಯಗೊಳಿಸಬೇಕು ಮತ್ತು ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು ಎಂದು ಬಿಜೆಪಿ ಮಂಡಲ ಸಮಿತಿ ಆಗ್ರಹಿಸಿದೆ.
ಮಂಜೇಶ್ವರ ಶಾಸಕರ ಹಾಗೂ ಲೋಕಪಯೋಗಿ ಇಲಾಖೆಯ ಬೇಜವಾಬ್ದಾರಿ ಮತ್ತು ಸ್ಥಳೀಯ ಪಂಚಾಯಿತಿಗಳ ಆಡಳಿತದ ನಿಷ್ಕ್ರಿಯತೆ ಇದಕ್ಕೆ ಕಾರಣ. ಜನರ ಸಮಸ್ಯೆಗೆ ಪರಿಹಾರ ಕಾಣದ ಶಾಸಕರು ವಿದೇಶ ಸುತ್ತುವುದು ಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಕೇಂದ್ರ ಸರ್ಕಾರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಯನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸುವುದನ್ನು ಬಿಟ್ಟು ತಮ್ಮ ಇಲಾಖೆಯ ರಸ್ತೆಗಳನ್ನು ದುರಸ್ತಿ ಮಾಡಲಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಆಗ್ರಹಿಸಿದ್ದಾರೆ.
ಬಾಯರ್- ಧರ್ಮತ್ತಡ್ಕ ರಸ್ತೆ ದುರಸ್ತಿಯ ಹೆಸರಲ್ಲಿ ವ್ಯಾಪಕ ಹಣ ಪೋಲು ಮಾಡಲಾಗಿದೆ. ಕುರುಡಪದವು ರಸ್ತೆ ಅವೈಜ್ಞಾನಿಕವಾಗಿದೆ. ಹೊಸಂಗಡಿ- ಮಜಿಬೈಲ್- ಕಂಗುಮೆ ಎಂಬಲ್ಲಿ ರಸ್ತೆ ಅರ್ಧ ಭಾಗ ಹಾನಿಗೊಂಡು 4 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಕನಿಷ್ಠ ದುರಸ್ತಿ ಆರಂಭಿಸದಿರುವುದು ಖಂಡನೀಯ. ತಕ್ಷಣ ಎಲ್ಲ ರಸ್ತೆಗಳನ್ನು ವೈಜ್ಞಾನಿಕವಾಗಿ ಮರು ಡಾಂಬರುಗೊಳಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.