ಸ್ವಂತ ಸೂರಿಲ್ಲದ ಬಿಜೆಪಿ, ಕಾಂಗ್ರೆಸ್ ! ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸೋಕೆ ಜಾಗವಿಲ್ಲ

BJP, Congress without their own voice! Party workers have no place to listen
BJP, Congress without their own voice! Party workers have no place to listen
Published on

ತುಮಕೂರು: ಕಾಂಗ್ರೆಸ್, ಬಿಜೆಪಿ ಜಿಲ್ಲಾ ಕೇಂದ್ರದಲ್ಲೇ ಸ್ವಂತ ಸೂರು ಹೊಂದಿಲ್ಲ. ಕಾಂಗ್ರೆಸ್ ಇಬ್ಭಾಗವಾದ ಬಳಿಕ ಸಂಸ್ಥಾ ಕಾಂಗ್ರೆಸ್ ಜನತಾ ಪಕ್ಷದೊಳಗೆ ವಿಲೀನವಾದ ನಂತರ 1976ರಲ್ಲಿ ಜನತಾ ಪಕ್ಷಕ್ಕೆ ಸ್ವಂತ ನೆಲೆಯೊಂದು ಸಿಕ್ಕಿತು. ಸದ್ಯ ಈ ಕಚೇರಿಯು ಜೆಡಿಎಸ್ ಒಡೆತನದಲ್ಲಿದೆ.

ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಆಸ್ತಿ. ಅಂತಹ ಪಕ್ಷಗಳು ಕಾರ್ಯಕರ್ತರನ್ನು ಕೆಲಕಾಲ ಕೂಡಿಸಿ, ಅವರ ಅಹವಾಲುಗಳನ್ನು ಆಲಿಸಲು ಕಚೇರಿಗಳನ್ನು ಹೊಂದದೇ ಇರುವುದು ಪಕ್ಷ ಸಂಘಟನೆಗೆ ಯಾವ ಮಟ್ಟದಲ್ಲಿ ಒತ್ತು ಕೊಡುತ್ತಿವೆ ಎಂಬುದಕ್ಕೆ ನಿದರ್ಶನವೆನಿಸಿದೆ.

ಕಚೇರಿ ಕಳೆದುಕೊಂಡ ಕಾಂಗ್ರೆಸ್: ಜಿಲ್ಲಾ ಕೇಂದ್ರದಲ್ಲಿ ಸ್ವಂತ ಕಚೇರಿ ಹೊಂದಿದ್ದ ಕಾಂಗ್ರೆಸ್ 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ (ಒ), ಸಂಸ್ಥಾ ಕಾಂಗ್ರೆಸ್, ಕಾಂಗ್ರೆಸ್ (ಐ) ಹೀಗೆ ಹಲವು ಬಣಗಳಾಗಿ ಇಬ್ಭಾಗವಾಯಿತು. ಆ ನಂತರ ಜನತಾ ಪಕ್ಷದಲ್ಲಿ ಸಂಸ್ಥಾ ಕಾಂಗ್ರೆಸ್ ವಿಲೀನಗೊಂಡಿತು. ಹಾಗಾಗಿ, ಸಂಸ್ಥಾ ಕಾಂಗ್ರೆಸ್ ಆಡಳಿತ ಕಚೇರಿ ಜನತಾ ಪಕ್ಷದ ಪಾಲಾಯಿತು. ಅಂದಿನಿಂದ ತಾಲೂಕು ಕೇಂದ್ರಗಳ ಜತೆಗೆ ಜಿಲ್ಲಾ ಕೇಂದ್ರದಲ್ಲೂ ಸ್ವಂತ ಕಚೇರಿ ಪಕ್ಷಕ್ಕಿಲ್ಲವಾಯಿತು. ಕಪಾಲಿ ಲಾಡ್ಜ್, ಗಾಂಧಿನಗರ, ಗುಂಚಿ ಸರ್ಕಲ್, ಎನ್‌ಇಪಿಎಸ್ ಠಾಣೆ ಮುಂಭಾಗ ನಂತರ ಎಚ್‌ಎಂಎಸ್ ಕಾಲೇಜು ಆವರಣದಲ್ಲಿ ಕೈ ಕಚೇರಿ ಇತ್ತು.

ಕಚೇರಿ ಕೈ ತಪ್ಪಿದ ಬಳಿಕ ಬಾಡಿಗೆ ಕಟ್ಟಡಗಳಲ್ಲೇ ಕಾಲದೂಡುತ್ತಾ ಬಂದಿರುವ ಜಿಲ್ಲಾ ಕಾಂಗ್ರೆಸ್ ರಾಜ್ಯದಲ್ಲಿ ಹಲವು ಬಾರಿ ಅಧಿಕಾರ ಹಿಡಿದರೂ ಪಕ್ಷಕ್ಕೆ ಸ್ವಂತ ನೆಲೆ ಕಂಡುಕೊಳ್ಳಲಿಲ್ಲ. ಎಸ್.ಷಫೀ ಅಹ್ಮದ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಬಳಿಕ ತಮ್ಮ ಒಡೆತನದ ಶೆಟ್ಟಿಹಳ್ಳಿ ಎಚ್‌ಎಂಎಸ್ ಶಿಕ್ಷಣ ಸಂಸ್ಥೆಯ ಆವರಣಕ್ಕೆ ಕಚೇರಿ ಶಿಫ್ಟ್ ಮಾಡಿಕೊಂಡರು.

2016ರಲ್ಲಿ ಆರ್.ರಾಮಕೃಷ್ಣ ಜಿಲ್ಲಾ ಕಾಂಗ್ರೆಸ್ ಸಾರಥ್ಯವಹಿಸದ ಬಳಿಕ ಪಕ್ಷ, ಕಚೇರಿ ಇಲ್ಲದೆ ಮತ್ತೆ ಅನಾಥವಾಯಿತು. ಆ ಸಂದರ್ಭದಲ್ಲಿ ಬಿ.ಎಚ್.ರಸ್ತೆಯ ಡಿ.ಎಸ್.ಕುಮಾರ್, ವಿನೋದ್ ಎಂಬುವರ ಒಡೆತನದ ಜಾಗವನ್ನು ಲೀಸ್‌ಗೆ ಪಡೆದು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಪಕ್ಷದ ಕಚೇರಿ ಕಾರ್ಯಾಚರಣೆ ಆರಂಭಿಸಲಾಯಿತು.

ಈ ವೇಳೆ ಕಾಂಗ್ರೆಸ್ ಸರ್ಕಾರವಿದ್ದರೂ ಪಕ್ಷಕ್ಕೆ ಆರ್‌ಸಿಸಿ ಕಟ್ಟಡ ಬಾಡಿಗೆ ಪಡೆಯುವ ಸಾಹಸವನ್ನು ಸಂಘಟನೆ ಹೊತ್ತವರು ಮಾಡಲಿಲ್ಲ. ಪಕ್ಷದ ಹಿತೈಷಿಗಳು, ಕಾರ್ಯಕರ್ತರ ದೇಣಿಗೆಯಿಂದ ಕೊರಟಗೆರೆ ಪಟ್ಟಣದಲ್ಲಿ ‘ರಾಜೀವ ಭವನ’ವನ್ನು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ನಿರ್ಮಿಸಲಾಗಿದ್ದು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆ ಮಾಡಿರುವುದು ವಿಶೇಷ. ಇನ್ಯಾವು ತಾಲೂಕುಗಳಲ್ಲೂ ಸ್ವಂತ ಕಚೇರಿ ಪಕ್ಷಕ್ಕಿಲ್ಲ.

ಬಾಡಿಗೆ ಕಚೇರಿಗಳಲ್ಲೇ ಬಿಜೆಪಿ: ಜನಸಂಘದ ನಂತರ ಉದಯವಾದ ಬಿಜೆಪಿಗೆ ರಾಜ್ಯದಲ್ಲೇ ನೆಲೆ ಇರಲಿಲ್ಲ. ಆದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂ.ಮಲ್ಲಿಕಾರ್ಜುನಯ್ಯ ಅವರಿಗೆ ಮಣೆ ಹಾಕಲಾಗುತ್ತಿತ್ತು. ಕರಂಬಳ್ಳಿ ಸಂಜೀವಶೆಟ್ಟರು ಪರಿಷತ್ ಬೈ ಎಲೆಕ್ಷನ್‌ನಲ್ಲಿ ಗೆದ್ದ ಬಳಿಕ ಅವರ ಒತ್ತಾಸೆ ಮೇರೆಗೆ ಕಚೇರಿ ತೆರೆಯಲಾಯಿತು. ಕೆ.ಆರ್.ಬಡಾವಣೆಯಲ್ಲಿ ಪಕ್ಷದ ಕಚೇರಿಗೆ ಬಾಡಿಗೆ ಕಟ್ಟಡ ಪಡೆಯಲಾಯಿತು. ಅಲ್ಲಿಂದ 2021ರವರೆಗೆ ಅದೇ ಕಟ್ಟಡದಲ್ಲಿ ಸಂಘಟನೆ ಮಾಡಿಕೊಂಡು ಬಂದ ಬಿಜೆಪಿ ಬಿ.ಎಚ್.ರಸ್ತೆಯ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಬಾಡಿಗೆ ಕಟ್ಟಡಕ್ಕೆ ಶಿಫ್ಟ್ ಆಯಿತು. ‘ಕಮಲಕೃಪ’ ಕಚೇರಿಯಲ್ಲಿ 2 ವರ್ಷಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.

ಸಂಸ್ಥಾ ಕಾಂಗ್ರೆಸ್ ವೀಲಿನಗೊಂಡ ಬಳಿಕ ನಗರದ ಅಶೋಕ ರಸ್ತೆಯಲ್ಲಿ ಸ್ವಂತ ಕಚೇರಿ ಗಿಟ್ಟಿಸಿಕೊಂಡ ಜನತಾ ಪಕ್ಷವು ಕಾಲಾನಂತರ ಜನತಾದಳ, ಸಂಯುಕ್ತ ಜನತಾದಳ, ಜೆಡಿಎಸ್ ಹೀಗೆ ಹೊಸ ಪಕ್ಷಗಳ ಉದಯವಾದರೂ ಜನತಾ ಪರಿವಾರದ ಒಡೆತನದಲ್ಲೇ ಕಚೇರಿ ಉಳಿಯಿತು. ಒಂದು ಕಾಲದಲ್ಲಿ 9 ಶಾಸಕರನ್ನು ಹೊಂದಿದ್ದ ಜನತಾದಳ ತಾಲೂಕು ಕೇಂದ್ರಗಳಲ್ಲಿ ಪಕ್ಷಕ್ಕೆ ಸ್ವಂತ ಕಚೇರಿ ಮಾಡಿಕೊಂಡಿಲ್ಲ. ಮೂಲ ಕಾಂಗ್ರೆಸ್ ಒಡೆತನದಲ್ಲಿದ್ದ ಜೆಡಿಎಸ್ ಕಚೇರಿಗಾಗಿ ಕೈ ಮುಖಂಡರು ಕಾನೂನು ಹೋರಾಟ ಆರಂಭಿಸಲು ಮುಂದಾಗಿದ್ದಾರೆ.

ಕೇಡರ್ ಬೇಸ್ ಪಕ್ಷ, ಕಾರ್ಯಕರ್ತರೇ ನಮ್ಮ ಆಸ್ತಿ ಎನ್ನುವ ರಾಜಕೀಯ ಪಕ್ಷಗಳು ಜಿಲ್ಲಾ ಕೇಂದ್ರದಲ್ಲೇ ಸ್ವಂತ ಕಚೇರಿಗಳನ್ನು ಹೊಂದದಿರುವುದು ಪರ್ಯಾಸ. ಇನ್ನಾದರೂ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಲು ಹತ್ತಾರು ವರ್ಷ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಬಿಜೆಪಿ ಸ್ವಂತ ಕಚೇರಿ ನಿರ್ಮಿಸಲಿವೆಯೇ ಕಾದು ನೋಡಬೇಕಿದೆ.

ಟೈಲರ್ ಶಾಪ್‌ನಲ್ಲೇ ಪಕ್ಷ ಸಂಘಟನೆ ! ದೇವಸ್ಥಾನ, ಪಕ್ಷನಿಷ್ಠ ಕಾರ್ಯಕರ್ತರ ಅಂಗಡಿ, ಮನೆ ಜಗುಲಿಗಳ ಮೇಲೆ ಜನಸಂಘ ಕಾಲದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿತ್ತು. ಮಂಡಿಪೇಟೆಯಲ್ಲಿ ಟೈಲರ್ ವೆಂಕೋಬರಾವ್ ಅಂಗಡಿ, ಹೋಟೆಲ್ ಸ್ಟ್ರೀಟ್‌ನ ಬಾಬುರಾಜೇಂದ್ರಪ್ರಸಾದ್ ಚಿಕ್ಕ ಅಂಗಡಿಗಳೇ ಕೆಲವರ್ಷ ಪಕ್ಷದ ಕಾರ್ಯಾಲಯಗಳಾಗಿದ್ದವು. ಕೆ.ಆರ್.ಬಡಾವಣೆಯಲ್ಲಿ ಬಾಡಿಗೆ ಪಡೆದು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕಾರ್ಯಾಲಯ ಆರಂಭವಾಗುವವರೆಗೆ ಈಗಿನ ಸೊಗಡುಶಿವಣ್ಣ ಅವರ ಮನೆಯಲ್ಲ್ಲಿ ಕಾರ್ಯಕರ್ತರು ಸೇರುತ್ತಿದ್ದ ಕಾಲ ಇತ್ತು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಮಾಜಿ ಶಾಸಕ ಬಿ.ಸುರೇಶಗೌಡ ತಮ್ಮ ಸ್ವಂತ ಜಾಗದಲ್ಲಿ ಎರಡು ಸಾವಿರ ಕಾರ್ಯಕರ್ತರು ಒಂದೆಡೆ ಸೇರಬಲ್ಲ ಬೃಹತ್ ‘ಶಕ್ತಿ ಕೇಂದ್ರ’ ಬಿಜೆಪಿ ಕಾರ್ಯಾಲಯವನ್ನು ಇತ್ತೀಚೆಗೆ ಆರಂಭಿಸಿದ್ದಾರೆ. ಅದಕ್ಕೂ ಮುನ್ನ ಶಿರಾದಲ್ಲಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಸುಸಜ್ಜಿತ ಕಾರ್ಯಾಲಯ ತಲೆಎತ್ತಿದೆ.

ಕೆಪಿಸಿಸಿ ಅಧ್ಯಕ್ಷರಿದ್ದಾಗಲೇ ಸ್ವಂತ ನಿವೇಶನ ಖರೀದಿಸಲಿಲ್ಲ: 2010ರಿಂದ 2018ರವರೆಗೆ ಎರಡು ಅವಧಿ ಡಾ.ಜಿ.ಪರಮೇಶ್ವರ ಕೆಪಿಸಿಸಿ ಸಾರಥಿಯಾಗಿದ್ದಾಗಲೂ ಜಿಲ್ಲಾ ಕಾಂಗ್ರೆಸ್‌ಗೆ ಸ್ವಂತ ಕಚೇರಿ ಹೊಂದುವ ಕನಸು ಈಡೇರಲಿಲ್ಲ. ಪರಂ ಈ ಬಾರಿ ಪ್ರತಿನಿಧಿಸುವ ಕೊರಟಗೆರೆ ಪಟ್ಟಣದಲ್ಲಿ ‘ರಾಜೀವ ಭವನ’ ತಾಲೂಕು ಕಾಂಗ್ರೆಸ್ ಕಚೇರಿ ನಿರ್ಮಿಸಿ ಕಾರ್ಯಕರ್ತರಲ್ಲಿ ಸ್ವಾಭಿಮಾನ ಮೂಡಿಸಿದ್ದಾರೆ. ಎಚ್.ಮಹದೇವ (ಮಾಧು ಸಾಹುಕಾರ್) ಜಾಗ ಕೊಟ್ಟಿದ್ದು ಪಕ್ಷದ ಹಿತೈಷಿಗಳು, ಕಾರ್ಯಕರ್ತರು ನೀಡಿದ ದೇಣಿಗೆಯಲ್ಲಿ ಭವನ ನಿರ್ಮಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net