

ಶಿವಮೊಗ್ಗ: ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ ಲಾಭ ಗಳಿಸಬಹುದೆಂದು ನಂಬಿಸಿ ಶಿವಮೊಗ್ಗದ ವೈದ್ಯೆಗೆ 28 ಲಕ್ಷ ರೂ. ವಂಚಿಸಲಾಗಿದೆ.
ಶಿವಮೊಗ್ಗದ ವೈದ್ಯೆಗೆ ಪರಿಚಿತ ವ್ಯಕ್ತಿಯೊಬ್ಬ ಜಿಡಿಸಿಸಿ ಕಾಯಿನ್ ಮೇಲೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ವೈದ್ಯೆ ಬಳಿ ಕರೆತಂದು, ಪ್ರತಿ ಡಿಜಿಟಲ್ ಕಾಯಿನ್ಗೆ 10 ಸಾವಿರ ರೂ. ಇರಲಿದೆ. ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಆಸೆ ಹುಟ್ಟಿಸಿದ್ದರು.
ಚೆಕ್ ಮೂಲಕ 28 ಲಕ್ಷ ರೂ. ಪಡೆದುಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಹಣದ ಕುರಿತು ವೈದ್ಯೆ ವಿಚಾರಿಸಿದಾಗ ಬಿಟ್ ಕಾಯಿನ್ ಇನ್ನು ಭಾರತಕ್ಕೆ ಬಂದಿಲ್ಲ ಎಂದು ಸಬೂಬು ಹೇಳಿದ್ದಾರೆ. ಹೀಗೆ ಎರಡು ವರ್ಷದಿಂದ ನಾನಾ ಕಾರಣ ಹೇಳಿದ್ದು, ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ವೈದ್ಯೆ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.