

ಬೆಂಗಳೂರು: ಬಿಟ್ ಕಾಯಿನ್ ವ್ಯವಹಾರದಲ್ಲಿ ನಡೆಸುತ್ತಿದ್ದ ಉದ್ಯಮಿಗಳ ವ್ಯಾಲೆಟ್ ಪಾಸ್ವರ್ಡ್ ಕದ್ದು ಸೈಬರ್ ಕಳ್ಳರು 3.66 ಕೋಟಿ ರೂ. ದೋಚಿದ್ದಾರೆ.
ಈ ಸಂಬಂಧ ಮಹದೇವಪುರದ ಬಿಟ್ಚಿಫೆರ್ ಲ್ಯಾಬ್ಸ್ ಎಲ್ಎಲ್ಪಿ ಕಂಪನಿಯ ಅಶಿಷ್ ಸಿಂಗಾಲ್ ಎಂಬು ವರು ಸಿಐಡಿಯ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದಾರೆ. ವಿಮಲ್ ಸಾಗರ್ ತಿವಾರಿ, ಗೋವಿಂದ್ ಕುಮಾರ್ ಸೋನಿ ಸೇರಿ ಬಿಟ್ಚಿಫೆರ್ ಲ್ಯಾಬ್ಸ್ ಕಂಪನಿಯ ವ್ಯಾಲೆಟ್ ಹೊಂದಿದ್ದೇವೆ. ಈ ಮೂಲಕ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದು, ಎಲ್ಲ ಪಾಸ್ವರ್ಡ್ ಗಳನ್ನು ವ್ಯಾಲೆಟ್ನಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ಇತ್ತೀಚೆಗೆ ಸೈಬರ್ ಕಳ್ಳರು ಜ.11ರಿಂದ ಮಾ.11ರ ನಡುವೆ ವ್ಯಾಲೆಟ್ಗೆ ಲಾಗಿನ್ ಆಗಿ ಪಾಸ್ವರ್ಡ್ ಕದ್ದಿದ್ದಾರೆ. ಇದರಿಂದಾಗಿ 3.66 ಕೋಟಿ ರೂ. ಬಿಟ್ ಕಾಯಿನ್ ಕೈತಪ್ಪಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಹಣ ವಾಪಸ್ ಬರುವಂತೆ ಮಾಡಬೇಕೆಂದು ದೂರಿನಲ್ಲಿ ಅಶಿಷ್ ಸೋನಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸೈಬರ್ ಲ್ಯಾಬ್ ತಜ್ಞರ ಸಹಾಯ ಕೋರಲಾಗಿದೆ ಎಂದು ಸೈಬರ್ ಕ್ರೖೆಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಏನಿದು ಬಿಟ್ ಕಾಯಿನ್?: ಬಿಟ್ ಕಾಯಿನ್ ಕಾಗದರಹಿತ ಡಿಜಿಟಲ್ ಕರೆನ್ಸಿ. ರೂಪಾಯಿ, ಡಾಲರ್, ಯೂರೋ ಅಥವಾ ಇನ್ಯಾವುದೇ ದೇಶದ ಅಧಿಕೃತ ಕರೆನ್ಸಿಯ ಮಾದರಿಯಲ್ಲಿ ಇರುವುದಿಲ್ಲ. ಎಲ್ಲ ವ್ಯವಹಾರ ಇಂಟರ್ನೆಟ್ನಲ್ಲಿ ನಡೆಯಲಿದೆ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳುಹಿಸಲು ಅಥವಾ ಪಡೆಯಲು ಬಳಸುತ್ತಾರೆ.