ಹುಟ್ಟಿನಮೂಲ ಕೆದಕಿ ಟ್ರಂಪ್ ವಾಗ್ದಾಳಿ: ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ವಿರುದ್ಧ ಟೀಕೆ

trump
Published on

ವಾಷಿಂಗ್ಟನ್: ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಹುಟ್ಟಿನ ಮೂಲದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಬೆಂಬಲಿಗರು ವಿವಾದವೆಬ್ಬಿಸುತ್ತಿದ್ದು, ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಭಾರತ ಹಾಗೂ ಜಮೈಕಾ ಮೂಲದ ದಂಪತಿಗೆ ಜನಿಸಿರುವ ಕಮಲಾ ಹ್ಯಾರಿಸ್ ಶ್ವೇತಭವನದಲ್ಲಿ ರಾಜಕೀಯ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಅರ್ಹರಲ್ಲ ಎಂದು ನಾನು ಕೇಳ್ಪಟ್ಟಿದ್ದೇನೆ. ಖ್ಯಾತ ವಕೀಲರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮತ್ತೊಂದೆಡೆ ಟ್ರಂಪ್ ಹೇಳಿಕೆಯನ್ನು ಡೆಮಾಕ್ರಟಿಕ್ ನಾಯಕರು ಕಟುವಾಗಿ ಟೀಕಿಸಿದ್ದು, ಅಧ್ಯಕ್ಷರು ಸಾಕ್ಷ್ಯ ರಹಿತ ಆರೋಪ ಮಾಡುತ್ತಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹುಟ್ಟಿನ ಬಗ್ಗೆ ಇದೇ ರೀತಿಯ ವಿವಾದ ಎದ್ದಿತ್ತು ಎಂಬುದು ನೆನಪಿರಲಿ ಎಂದಿದ್ದಾರೆ.

ಟ್ರಂಪ್ ಪಡೆಯ ವರ್ಣಭೇದ ನೀತಿಯನ್ನು ಇದು ತೋರಿಸುತ್ತದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಜೋ ಬಿಡನ್ ಟೀಕಿಸಿದ್ದಾರೆ. ಕಮಲಾರ ಪೌರತ್ವ ಕುರಿತು ನಡೆಯುತ್ತಿರುವ ಚರ್ಚೆ ಅನಗತ್ಯ ವಿವಾದ ಎಂದು ಡೆಮಾಕ್ರಟಿಕ್ ಪಕ್ಷದ ನ್ಯಾಷನಲ್ ಫೈನಾನ್ಸ್ ಸಮಿತಿಯ ಅಜಯ್ ಭುಟೊರಿಯಾ ಹೇಳಿದ್ದಾರೆ.

2010ರಲ್ಲಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಹುದ್ದೆಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಡಾ.ಜಾನ್ ಈಸ್ಟ್ ಮನ್, ಕಮಲಾರ ಹುಟ್ಟಿನ ಮೂಲದ ಬಗ್ಗೆ ಮೊದಲು ಕೆದಕಿದ್ದರು. ಬಳಿಕ ಈ ಕುರಿತು ಜಾಲತಾಣಗಳಲ್ಲಿ ಭಾರಿ ಚರ್ಚೆಗಳಾಗುತ್ತಿದೆ.

ಸಂವಿಧಾನ ಏನು ಹೇಳುತ್ತದೆ?

ಸಂವಿಧಾನದ ಪ್ರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವವರು ಸಹಜವಾಗಿ ಹುಟ್ಟಿನಿಂದ ಅಮೆರಿಕದ ಪ್ರಜೆಯಾಗಿರಬೇಕು ಮತ್ತು ಅವರಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಮೆರಿಕದಲ್ಲಿ ಜನಿಸಿದ ಆಫ್ರಿಕನ್ ಮೂಲದ ಜನರಿಗೆ ಪೌರತ್ವ ನಿರಾಕರಿಸುವ ನಿಯಮವನ್ನು 1868ರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಂವಿಧಾನಕ್ಕೆ 14ನೇ ತಿದ್ದುಪಡಿ ತರುವ ಮೂಲಕ ಅಂಗೀಕರಿಸಲಾಯಿತು.

ಭಾರತ ಮೂಲದ ಶ್ಯಾಮಲಾ ಗೋಪಾಲನ್ ಮತ್ತು ಜಮೈಕಾ ಮೂಲದ ಡೊನಾಲ್ಡ್ ಹ್ಯಾರಿಸ್ ದಂಪತಿಗೆ ಕ್ಯಾಲಿಫೋರ್ನಿಯಾದ ಒಕ್ಲೆಂಡ್​ನಲ್ಲಿ 1964ರ ಅಕ್ಟೋಬರ್ 20ರಂದು ಕಮಲಾ ಜನಿಸಿದರು. ಕಮಲಾ ಜನಿಸಿದ ವೇಳೆಗೆ ಅವರ ಹೆತ್ತವರ ವಲಸೆ ಸ್ಥಿತಿಯನ್ನು ಪರಿಗಣಿಸಿದರೆ ಅವರು ಅಮೆರಿಕದ ಪ್ರಜೆಗಳಾಗುವುದಿಲ್ಲ ಎಂದು ಕಾನೂನು ಪ್ರಾಧ್ಯಾಪಕ ಆಪ್​ಎಡ್ ಪ್ರತಿಪಾದಿಸಿದ್ದಾರೆ. ಆದರೆ, 1968ರ ಸಂವಿಧಾನದ 14ನೇ ತಿದ್ದುಪಡಿ ಪ್ರಕಾರ ಕಮಲಾ ಅಮೆರಿಕದ ಪ್ರಜೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net