ಬಯೋಪಿಕ್​ನಲ್ಲಿ ನನ್ನ ಪಾತ್ರ ಇವರಲ್ಲೊಬ್ಬರು ಮಾಡಲಿ: ಸಾನಿಯಾ ಮಿರ್ಜಾ ಒಲವು ಯಾರ ಮೇಲೆ?

Sania Mirza 27 MAR 20
Published on

ಬೆಂಗಳೂರು: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಬಯೋಪಿಕ್ ಆಗುತ್ತಿರುವುದು ಗೊತ್ತೇ ಇದೆ. ಮುಂಚೆ ಪರಿಣಿತಿ ಚೋಪ್ರಾ ಅವರು ಸಾನಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಪರಿಣಿತಿಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲ. ಹಾಗಾದರೆ, ಸಾನಿಯಾ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. ನಾಲ್ಕು ನಾಯಕಿಯರ ಅವರೇ ಗುರುತಿಸಿ, ಅವರಲ್ಲಿ ಒಬ್ಬರಿಂದ ಪಾತ್ರ ಮಾಡಿಸಬಹುದು ಎಂಬ ಸಲಹೆಯನ್ನು ನೀಡಿದ್ದಾರೆ.

ಇಷ್ಟಕ್ಕೂ ಸಾನಿಯಾ ಆಯ್ಕೆ ಮಾಡಿರುವ ನಾಲ್ವರು ನಟಿಯರು ಯಾರು ಗೊತ್ತಾ? ಆಲಿಯಾ ಭಟ್, ಅನೂಷ್ಕಾ ಶರ್ಮ, ದೀಪಿಕಾ ಪಡುಕೋಣೆ ಮತ್ತು ಸಾರಾ ಅಲಿ ಖಾನ್. ಈ ಪೈಕಿ ಯಾರಾದರೂ ಒಬ್ಬರಿಂದ ತಮ್ಮ ಪಾತ್ರ ಮಾಡಿಸಬಹುದು ಎಂದು ಸ್ವತಃ ಸಾನಿಯಾ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಬಯೋಪಿಕ್‌ನಲ್ಲಿ ನನ್ನ ಪಾತ್ರವನ್ನು ಪರಿಣಿತಿ ಚೋಪ್ರಾ ಮಾಡುತ್ತಿಲ್ಲ. ಏಕೆಂದರೆ, ಅವರು ಸೈನಾ ನೆಹವಾಲ್ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಅವರಿಗೆ ನನ್ನ ಬಯೋಪಿಕ್‌ನಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪರಿಣಿತಿ ಹೊರತಾಗಿ, ನಮ್ಮಲ್ಲಿ ಹಲವು ಅದ್ಭುತ ಕಲಾವಿದೆಯರಿದ್ದಾರೆ. ಈ ಪೈಕಿ ಆಲಿಯಾ ಭಟ್, ಅನೂಷ್ಕಾ ಶರ್ಮ, ದೀಪಿಕಾ ಪಡುಕೋಣೆ ಮತ್ತು ಸಾರಾ ಅಲಿ ಖಾನ್ ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಬಹುದು. ಸದ್ಯಕ್ಕೆ ನಾಯಕಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂದು ಗೊತ್ತಿಲ್ಲ. ಈ ಬಗ್ಗೆ ಚಿತ್ರತಂಡ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಅಂದಹಾಗೆ, ಸಾನಿಯಾ ಮಿರ್ಜಾ ಅವರ ಬದುಕನ್ನು ಚಿತ್ರ ಮಾಡುವುದಕ್ಕೆ ಖ್ಯಾತ ನಿರ್ಮಾಪಕ ರಾನ್ನಿ ಸ್ಕ್ರೂವಾಲಾ ಮುಂದೆ ಬಂದಿದ್ದು, ಈಗಾಗಲೇ ಬಯೋಪಿಕ್ ಮಾಡುವ ಹಕ್ಕುಗಳನ್ನು ಪಡೆದಿದ್ದರು. ಈಗಾಗಲೇ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಸದ್ದಿಲ್ಲದೆ ಪ್ರಾರಂಭವಾಗಿದ್ದು, ಸಾನಿಯ ಪಾತ್ರ ಯಾರು ಮಾಡುತ್ತಾರೆ, ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬತಹ ಮಾಹಿತಿಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net