

ಕುಂದಾಪುರ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಕೃಷ್ಣ ಪೂಜಾರಿ (45) ಮೃತಪಟ್ಟ ಘಟನೆ ರಾಜ್ಯ ಹೆದ್ದಾರಿ 5ರ ಕುಂದಾಪುರ-ಸಿದ್ದಾಪುರ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಕುಂದಾಪುರ- ಸಿದ್ದಾಪುರ ರಸ್ತೆಯಲ್ಲಿ ಬಸ್ರೂರು ಮೂರುಕೈಯಿಂದ ಕೋಣಿ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಕೃಷ್ಣ ಪೂಜಾರಿ ಬೈಕ್ ಆಯತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.