

ಪಟನಾ: ಬಿಹಾರ ರಾಜಧಾನಿ ಪಟನಾದಲ್ಲಿ ನಿನ್ನೆ (ಜ.20) ಮೊಸರು ತಿನ್ನುವ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಕೇವಲ 3 ನಿಮಿಷಗಳಲ್ಲಿ 3.5 ಕೆಜಿ ಮೊಸರು ತಿನ್ನುವ ಮೂಲಕ ದಾಖಲೆ ಬರೆದಿದ್ದಾನೆ.
ಕಳೆದ 10 ವರ್ಷದಿಂದ ಈ ಸ್ಪರ್ಧೆಯನ್ನು ಆಯೋಜನೆ ಮಾಡಿಕೊಂಡ ಬರಲಾಗಿದೆ. ಮಹಿಳೆಯರು, ಪುರುಷರು ಹಾಗೂ ಹಿರಿಯ ನಾಗರಿಕರು ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಮೊಸರಿನಲ್ಲಿರುವ ಆರೋಗ್ಯದ ಲಾಭವನ್ನು ಪ್ರಚಾರ ಮಾಡುವ ಉದ್ದೇಶದಿಂದ ಬಿಹಾರದ ಸುಧಾ ಡೈರಿ ಈ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ.
ಬಿಹಾರದ ಬಾರ್ಹ್ ಮೂಲದ ನಿವಾಸಿ ಅಜಯ್ ಕುಮಾರ್ ಎಂಬುವರು 3 ನಿಮಿಷಗಳಲ್ಲಿ 3 ಕೆಜಿ 420 ಗ್ರಾಂ ಮೊಸರು ತಿನ್ನುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಪಟನಾ ಮೂಲದ ಪ್ರೇಮಾ ತಿವಾರಿ ಎಂಬುವರು ಅದೇ ಸಮಯದಲ್ಲಿ 2 ಕೆಜಿ 718 ಗ್ರಾಂ ಮೊಸರು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದರು.
ಹಿರಿಯ ನಾಗರಿಕರ ವಿಭಾಗದಲ್ಲಿ ಹಾಲಿ ಚಾಂಪಿಯನ್ ಆಗಿರುವ ಶಂಕರ್ ಕಾಂತ್ ಎಂಬುವರು 3 ನಿಮಿಷದಲ್ಲಿ 3 ಕೆಜಿ 647 ಗ್ರಾಂ ಮೊಸರು ತಿನ್ನುವ ಮೂಲಕ ದಾಖಲೆ ಬರೆದರು. ಮೂವರು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ‘
ಕಳೆದ ವರ್ಷ ಶಂಕರ್ ಕಾಂತ್ ಅವರು 4 ಕೆಜಿ ಮೊಸರು ತಿಂದಿದ್ದರು. ಈ ಬಾರಿ 500 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)