ಬಿಹಾರ ಚುನಾವಣೆ: ಆರು ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿ ಕೊನೆ ಕ್ಷಣದಲ್ಲಿ ಹೊರಗುಳಿದ ಜೆಎಂಎಂ | JMM

ವಿಜಯವಾಣಿ (69)
Published on

Patna : ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ(JMM) ಪಕ್ಷ ಮುಂದಿನ ತಿಂಗಳು ನಡೆಯಲಿರುವ ಬಿಹಾರ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಆದರೆ ಇಂದು(ಅ. 20) ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಣದಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

ಆದರೆ ತಮ್ಮ ಈ ನಿರ್ಧಾರಕ್ಕೆ ಇಂಡಿಯಾ ಮೈತ್ರಿಕೂಟದ  ಮಿತ್ರಪಕ್ಷಗಳಾದ ಆರ್​ಜೆಡಿ ಮತ್ತು ಕಾಂಗ್ರೆಸ್​ನ ಪಿತೂರಿ ಕಾರಣ ಎಂದು ಆರೋಪಿಸಿದ್ದು, ಜಾರ್ಖಂಡ್​ನಲ್ಲಿ ಅವರೊಂದಿಗಿನ ಮೈತ್ರಿಯನ್ನು ಮರು ಮೌಲ್ಯಮಾಪನ ಮಾಡುವುದಾಗಿ ಹೇಳಿದೆ.

ಈ ಕುರಿತು ಮಾತನಾಡಿರುವ ಜಾರ್ಖಂಡ್ ಪ್ರವಾಸೋದ್ಯಮ ಸಚಿವ ಸುದಿವ್ಯ ಕುಮಾರ್, ರಾಜಕೀಯ ಪಿತೂರಿಯ ಭಾಗವಾಗಿ ಬಿಹಾರ ಚುನಾವಣೆಯಲ್ಲಿ ಜೆಎಂಎಂ ಸ್ಪರ್ಧಿಸದಂತೆ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಿತೂರಿ ಮಾಡಿವೆ. ಜೆಎಂಎಂ ಇದಕ್ಕೆ ಸೂಕ್ತ ಉತ್ತರ ನೀಡುತ್ತದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಪರಿಶೀಲಿಸುತ್ತದೆ  ಎಂದು ಹೇಳಿದ್ದಾರೆ.

ಜೆಎಂಎಂ ಜೊತೆ ರಾಜಕೀಯ ಆಟ ಆಡಲಾಗಿದೆ. ನಾವು ಅಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಈ ಚುನಾವಣೆಯಲ್ಲಿ ಮಹಾಘಟಬಂಧನ್ ಪರಿಣಾಮಗಳನ್ನು ಅನುಭವಿಸುತ್ತದೆ ಎಂದಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಜೆಎಂಎಂ ಬಿಹಾರದ ಆರು ಸ್ಥಾನಗಳಾದ ಚಕೈ, ಧಮ್ದಹಾ, ಕಟೋರಿಯಾ, ಮಣಿಹರಿ, ಜಮುಯಿ ಹಾಗೂ ಪಿರ್ಪೈಂಟಿಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಆರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದೆ.

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net